ಮಳೆ ನಿಂತರೂ ತಗ್ಗದ ಪ್ರವಾಹ: ಕಾಳಜಿ ಕೇಂದ್ರಗಳಲ್ಲಿ ಜನರ ಆಶ್ರಯ

Update: 2020-10-16 12:09 GMT

ಬೆಂಗಳೂರು, ಅ. 16: ಸತತ ನಾಲ್ಕೈದು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಕೊಂಚ ತಗ್ಗಿದೆ. ಆದರೆ, ನೆರೆಯ ಮಹಾರಾಷ್ಟ್ರ ಜಲಾಶಯಗಳಿಂದ ಹೆಚ್ಚಿನ ಪ್ರಮಾಣ ನೀರು ಹೊರ ಬಿಡುತ್ತಿರುವುದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಕ್ಷಣ ಕ್ಷಣಕ್ಕೂ ಪ್ರವಾಹ ಏರುತ್ತಿದ್ದು, ಸಾವಿರಾರು ಜನರು ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ-ಪ್ರವಾಹದಿಂದ ತೊಯ್ದು ತೊಪ್ಪೆಯಾಗಿರುವ ಜನರು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳು ಸೇರಿದಂತೆ ಗ್ರಾಮದ ಎತ್ತರ ಪ್ರದೇಶಗಳಲ್ಲಿ ಸರಕಾರ ಸ್ಥಾಪಿಸಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಹಲವು ಗ್ರಾಮಗಳು ಜಲಾವೃತಗೊಂಡು ರಸ್ತೆ ಸಂಪರ್ಕಗಳು ಕಡಿದು ಹೋಗಿದೆ.

ಸುರಕ್ಷಿತ ಸ್ಥಳಕ್ಕೆ ರವಾನೆ: ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಜಿಲ್ಲೆಯಾದ್ಯಂತ 50 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ನಿರಾಶ್ರಿತರಿಗ ಆಶ್ರಯ ಕಲ್ಪಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳನ್ನು ನಿಯೋಜಿಸಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿಯ ಜೇವರ್ಗಿ, ಚಿತ್ತಾಪುರ, ಅಫ್ಜಲ್‍ಪುರ, ಕಲಬುರಗಿ, ಶಹಬಾದ್ ಹಾಗೂ ಕಾಳಗಿ ತಾಲೂಕುಗಳಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರೂ ಸೇರಿ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಎನ್‍ಡಿಆರ್‍ಎಫ್ ಪರಿಹಾರ ಕಾರ್ಯದಲ್ಲಿ ನಿರತವಾಗಿದ್ದು, ಇನ್ನು 2 ತಂಡಗಳನ್ನು ಪ್ರವಾಹಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ ಎಂದು ತಿಳಿಸಲಾಗಿದೆ.

315 ಕೋಟಿ ರೂ.ನಷ್ಟ: ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಮುಂಬೈ- ಕರ್ನಾಟಕದಲ್ಲಿ ಮಳೆ-ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲೆಯ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹದ ಭೀತಿ ಆವರಿಸಿದೆ.

ಸವದತ್ತಿ, ಬೈಲಹೊಂಗಲ, ಗೋಕಾಕ್, ಚಿತ್ತೂರು ಹಾಗೂ ಖಾನಾಪುರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಮಳೆ-ಪ್ರವಾಹದ ಅಬ್ಬರಕ್ಕೆ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಆರು ಜಾನುವಾರುಗಳು ಸಾವನ್ನಪ್ಪಿವೆ. ಮಳೆಯ ಅಬ್ಬರಕ್ಕೆ ನೂರಾರು ಮನೆಗಳು ಧರೆಗುರುಳಿದ್ದು, ಜನರ ಬದುಕು ಈ ವರ್ಷವೂ ಬೀದಿಗೆ ಬಿದ್ದಿದೆ. ಇನ್ನು ಜಿಲ್ಲೆಯಲ್ಲಿ ಅಂದಾಜು ನಷ್ಟ 315 ಕೋಟಿ ರೂ.ಗೆ ತಲುಪಿದೆ. ಜಿಲ್ಲೆಯಲ್ಲಿ 270 ಮನೆಗಳು ಕುಸಿದಿದ್ದು, 60 ಮನೆಗಳು ಸಂಪೂರ್ಣ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಅಬ್ಬರ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಕಟಾವಿಗೆ ಬಂದಿದ್ದ ಕಬ್ಬು, ಹತ್ತಿ ಹಾಗೂ ಸೋಯಾ ಸೇರಿದಂತೆ ಬಹುತೇಕ ಬೆಳೆಗಳು ನೀರು ಪಾಲಾಗಿವೆ. ಕಳೆದ ವರ್ಷ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಬೆಳೆಗಳು, ಈ ವರ್ಷವೂ ನೀರು ಪಾಲಾಗಿದೆ. ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಈ ತಿಂಗಳಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ 35,238 ಹೆಕ್ಟರ್ ಕೃಷಿ ಭೂಮಿ ಜಲಾವೃತಗೊಂಡಿದೆ. 35.55 ಹೆಕ್ಟರ್ ತೋಟಗಾರಿಕೆ ಬೆಳೆಗಳು ಮಳೆಗೆ ಆಹುತಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News