ಎಸೆಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಶೇ.51.28 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

Update: 2020-10-16 12:24 GMT

ಬೆಂಗಳೂರು, ಅ.16: ಕೊರೋನ ಆತಂಕದ ನಡುವೆಯೇ ರಾಜ್ಯಾದ್ಯಂತ ನಡೆದಿರುವ ಎಸೆಸೆಲ್ಸಿ ಪೂರಕ ಪರೀಕ್ಷೆಗಳ ಫಲಿತಾಂಶ ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟಗೊಂಡಿದೆ ಹಾಗೂ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೂ ಸಂದೇಶ ರವಾನಿಸಲಾಗಿದೆ.

ಪೂರಕ ಪರೀಕ್ಷೆ ಸೆಪ್ಟೆಂಬರ್ 21ರಿಂದ 29ರವರೆಗೆ 772 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆಗೆ 2,13,955 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಶಾಲಾ ಅಭ್ಯರ್ಥಿಗಳು 3354, ಪುನರಾವರ್ತಿತ 1,93,370, ಖಾಸಗಿ 1759, ಪುನರಾವರ್ತಿತ ಖಾಸಗಿ 15,472 ಜನ ಪರೀಕ್ಷೆ ಬರೆದಿದ್ದರು.

ಉತ್ತರ ಪತ್ರಿಕೆಗಳ ಮೌಲ್ಯಮಾಪಕ್ಕೆ ಅಕ್ಟೋಬರ್ 7ರಿಂದ 13ರವರೆಗೆ 84 ಮೌಲ್ಯಮಾಪನ ಕೇಂದ್ರಗಳಲ್ಲಿ 13,834 ಮೌಲ್ಯಮಾಪಕರನ್ನು ನಿಯೋಜಿಸಲಾಗಿತ್ತು. ಶುಕ್ರವಾರ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ವೆಬ್‍ಸೈಟ್ kseeb.kar.nic.in ಅಥವಾ karresults.nic.in ನಲ್ಲಿ ನೋಡಬಹುದಾಗಿದೆ.

ಈ ಬಾರಿ 2,13,955 ವಿದ್ಯಾರ್ಥಿಗಳಲ್ಲಿ 1,09,719 ಪಾಸ್ ಆಗಿದ್ದು, 51.28% ಫಲಿತಾಂಶ ಬಂದಿದೆ. ಇದರಲ್ಲಿ ಬಾಲಕರು 1,35,202 ಹಾಜರಾಗಿದ್ದು, 65,652 ವಿದ್ಯಾರ್ಥಿಗಳು ಪಾಸ್ (ಶೇ.48.56) ಆಗಿದ್ದಾರೆ. ಅದೇ ರೀತಿ 78,753 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, 44,067 ವಿದ್ಯಾರ್ಥಿನಿಯರು ಪಾಸ್(ಶೇ.55.96) ಆಗಿದ್ದಾರೆ. ಉಳಿದಂತೆ ನಗರ ಪ್ರದೇಶದಲ್ಲಿ ಶೇ. 48.25%, ಗ್ರಾಮೀಣ ಪ್ರದೇಶ- ಶೇ.54.21% ಫಲಿತಾಂಶ ಬಂದಿದೆ..

ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿಗಾಗಿ ಅಕ್ಟೋಬರ್ 17 ರಿಂದ 21ರವರೆಗೆ ಅರ್ಜಿ ಸಲ್ಲಿಸಬಹುದು. ಮರು ಎಣಿಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 20ರಿಂದ 28ರವರೆಗೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 20-29ರವರೆಗೆ ದಿನಾಂಕ ನಿಗದಿಪಡಿಸಲಾಗಿದೆ.

ಕಳೆದ ತಿಂಗಳು ನಡೆದ ಎಸೆಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.51.28 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷದ ಪೂರಕ ಪರೀಕ್ಷೆಗೆ ಹೋಲಿಸಿದರೆ ಈ ಬಾರಿ ಶೇ.8.81ರಷ್ಟು ಹೆಚ್ಚಿನ ಫಲಿತಾಂಶ ಬಂದಿದೆ. ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ಉತ್ತಮ ಬೆಳವಣಿಗೆ.

-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News