ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 94ನೇ ರ‌್ಯಾಂಕ್: ಪಾಕ್, ಬಾಂಗ್ಲಾಕ್ಕಿಂತಲೂ ಕಳಪೆ ಸಾಧನೆ!

Update: 2020-10-16 17:05 GMT

ಹೊಸದಿಲ್ಲಿ,ಅ.16: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 94ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ ಹಸಿವು ಸೂಚ್ಯಂಕದಲ್ಲಿ ಭಾರತವು 102ನೇ ಸ್ಥಾನದಲ್ಲಿದ್ದು, ಈ ವರ್ಷ 8  ರ‌್ಯಾಂಕ್ ನಷ್ಟು ಏರಿಕೆಯಾಗಿದೆ. ಆದರೆ ಅದು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (88ನೇ ರ್ಯಾಂಕ್) ಹಾಗೂ ಬಾಂಗ್ಲಾದೇಶ (75ನೇ ರ್ಯಾಂಕ್)ಗಳಿಗಿಂತ ಕಳಪೆ ಸಾಧನೆ ಮಾಡಿದೆ. ಇದರಿಂದಾಗಿ ಹಸಿವು ಸೂಚ್ಯಂಕದಲ್ಲಿ ಭಾರತವನ್ನು ಅತ್ಯಂತ ಗಂಭೀರಾವಸ್ಥೆಯ ಶ್ರೇಣಿಯಲ್ಲೇ ಉಳಿಸಲಾಗಿದೆ ಎಂದು ವರದಿ ಹೇಳಿದೆ.

‘ಜಾಗತಿಕ ಹಸಿವು ದಿನ’ವಾದ ಶುಕ್ರವಾರ ಬಿಡುಗಡೆಯಾದ ಈ ಸೂಚ್ಯಂಕವು ಜಗತ್ತಿನಾದ್ಯಂತ 107 ದೇಶಗಳಲ್ಲಿನ ಹಸಿವಿನ ಪ್ರಮಾಣ ಹಾಗೂ ಅಪೌಷ್ಟಿಕತೆಯ ಪ್ರಮಾಣದ ವಿವರಗಳನ್ನು ನೀಡಿದೆ. ಈ ವರ್ಷವು 132 ದೇಶಗಳ ಹಸಿವಿನ ಹಾಗೂ ಅಪೌಷ್ಟಿಕತೆಯ ದತ್ತಾಂಶಗಳನ್ನು ಅದು ಸಂಗ್ರಹಿಸಿತ್ತಾದರೂ, ಆ ಪೈಕಿ ಕೇವಲ 107 ದೇಶಗಳನ್ನು ಮಾತ್ರವೇ ರ್ಯಾಂಕಿಂಗ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು.

ಮಕ್ಕಳ ದೇಹತೂಕದ ಪ್ರಮಾಣದಲ್ಲೂ ಭಾರತದ ಸಾಧನೆ ಅತ್ಯಂತ ಕಳಪೆಯಾಗಿದೆ. 2020ರಲ್ಲಿ ಕಡಿಮೆ ದೇಹತೂಕದ ಭಾರತೀಯ ಮಕ್ಕಳ ಪ್ರಮಾಣವು ಶೇ.17.3 ಆಗಿದ್ದು , ಇದು ಕಳೆದ ವರ್ಷಕ್ಕಿಂತ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. 2019ರ ಸಾಲಿನಲ್ಲಿ ಕಡಿಮೆ ದೇಹತೂಕದ ಭಾರತೀಯ ಮಕ್ಕಳ ಪ್ರಮಾಣ ಶೇ.20.8 ಶೇಕಡ ಆಗಿತ್ತು.

  ಭಾರತದಲ್ಲಿ ಶೇ. 37.4ರಷ್ಟು ಮಕ್ಕಳು ಕುಂಠಿತವಾದ ದೇಹವುಳ್ಳವರೆಂದು ಸೂಚ್ಯಂಕವು ತಿಳಿಸಿದೆ. ತಮ್ಮ ವಯಸ್ಸಿಗಿಂತ ಕಡಿಮೆ ಎತ್ತರವನ್ನು ಈ ಮಕ್ಕಳು ಹೊಂದಿರುವುದು ಅವರ ದೀರ್ಘ ಸಮಯದಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ವರದಿಯು ಹೇಳಿದೆ.

  ಭಾರತದಲ್ಲಿ ಅವಧಿಗೆ ಪೂರ್ವ ಪ್ರಸವ ಹಾಗೂ ಜನನಕಾಲದಲ್ಲಿ ಕಡಿಮೆ ತೂಕದಿಂದಾಗಿ ಸಾವಿಗೀಡಾಗುವ ಮಕ್ಕಳ ಸಂಖ್ಯೆಯೂ ಅಧಿಕವಾಗಿದೆ ಎಂದು ಸೂಚ್ಯಂಕದಿಂದ ತಿಳಿದುಬಂದಿದೆ.

  ಕಳಪೆ ಮಟ್ಟದ ವೈವಿಧ್ಯಮಯ ಆಹಾರ, ತಾಯಂದಿರಿಗೆ ಶಿಕ್ಷಣದ ಕೊರತೆ ಹಾಗೂ ಕೌಟುಂಬಿಕ ಬಡತನ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಕುಟುಂಬಗಳು ಶಿಶುಮರಣವು ಹೆಚ್ಚಾಗಿರುವುದನ್ನು 1991ರಿಂದ 2014ರವರೆಗೆ ಬಾಂಗ್ಲಾದೇಶ, ಭಾರತ, ನೇಪಾಳ ಹಾಗೂ ಪಾಕಿಸ್ತಾನಗಳಲ್ಲಿ ಸಂಗ್ರಹವಾಗಿರುವ ದತ್ತಾಂಶಗಳು ತೋರಿಸಿಕೊಟ್ಟಿವೆ ಎಂದು ವರದಿ ತಿಳಿಸಿದೆ.

 ಆದಾಗ್ಯೂ ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಮಾಣದಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿದೆಯೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News