ಕೋವಿಡ್-19 ಸಂದರ್ಭ ಮಕ್ಕಳ ಆರೋಗ್ಯ ಸಂರಕ್ಷಣೆಗೆ ಜಿಲ್ಲಾಡಳಿತ ಆದ್ಯತೆ ನೀಡಬೇಕು: ಡಾ.ಆರ್.ಜಿ.ಆನಂದ್

Update: 2020-10-17 18:38 GMT

ಚಿಕ್ಕಮಗಳೂರು, ಅ.17:  ಜಿಲ್ಲೆಯಲ್ಲಿ ಕೋವಿಡ್-19ರ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಬೇಕು. ಅಂಗನವಾಡಿಗಳು ಮಕ್ಕಳಿಗೆ ಪೌಷ್ಠಿಕ ಸಮತೋಲನ ಆಹಾರ ಸಿಗುವಂತೆ ನೋಡಿಕೊಳ್ಳಬೇಕು. ಮಾತೃ ಪೂರ್ಣ ಯೋಜನೆಯಡಿ ಗರ್ಭಿಣಿ ಬಾಣಂತಿಯರಿಗೆ ಆಹಾರ ಸರಬರಾಜು ನಿಯಮಿತವಾಗಿ ವಿತರಣೆಯಾಗುವಂತೆ ಕ್ರಮವಹಿಸಲು ಜಿಲ್ಲಾಡಳಿತ ಅಗತ್ಯ ಕ್ರಮವಹಿಸಬೇಕೆಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ  ಡಾ.ಆರ್.ಜಿ.ಆನಂದ್ ಸೂಚಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಕ್ಕಳಲ್ಲಿ ಕೊರೋನ ಸೋಂಕಿನ ಕುರಿತಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್-19 ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಾಗಿ ನಿಗಾವಹಿಸಿದೆ. ಅಂಗನವಾಡಿಗಳು ಮಕ್ಕಳಿಗೆ ಪೌಷ್ಠಿಕ ಸಮತೋಲನ ಆಹಾರ ಸಿಗುವಂತೆ ನೋಡಿಕೊಳ್ಳಬೇಕು. ಮಾತೃ ಪೂರ್ಣ ಯೋಜನೆಯಡಿ ಗರ್ಭಿಣಿ ಬಾಣಂತಿಯರಿಗೆ ಆಹಾರ ಸರಬರಾಜು ನಿಯಮಿತವಾಗಿ ವಿತರಣೆಯಾಗುವಂತೆ ಕ್ರಮ ವಹಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಮೂಲಕ ಹೆಚ್ಚು ಜನಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಮನೆ-ಮನೆಗಳಿಗೆ ತೆರಳಿ ಕೋವಿಡ್ ತಪಾಸಣೆ ನಡೆಸಿ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ತಿಳಿಸಿದರು. 

ಜಿಲ್ಲೆಯಲ್ಲಿ 18 ವರ್ಷದೊಳಗಿನ ಒಟ್ಟು 1,54,006 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕೋವಿಡ್-19 ಇರುವ ಹಿನ್ನಲೆಯಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಹಾಗೂ ಆನ್‍ಲೈನ್ ಮೂಲಕ ಸಾಕಷ್ಟು ಮಕ್ಕಳಿಗೆ ಶಿಕ್ಷಣ ಸೇವೆ ಒದಗಿಸಲಾಗುತ್ತಿದೆ. ವಿದ್ಯಾಗಮ ಯೋಜನೆ ಪ್ರಾರಂಭದಿಂದ ಈವರೆಗೆ ಜಿಲ್ಲೆಯಲ್ಲಿ 16 ಮಕ್ಕಳಿಗೆ ಮಾತ್ರ ಕೊರೋನ ಸೋಂಕು ಧೃಡಪಟ್ಟಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಮಕ್ಕಳು ಗುಣಮುಖರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 
ನಗರದಲ್ಲಿ ಆಶಾಕಿರಣ ಮತ್ತು ಕಡೂರು ಪಟ್ಟಣದಲ್ಲಿ ನಿವೇಧಿತಾ ಅಂಧ ಮಕ್ಕಳ ಪೋಷಣಾ ಕೇಂದ್ರಗಳಿದ್ದು, ಈ ಎರಡು ಕೇಂದ್ರಗಳಲ್ಲಿ 200ಕ್ಕೂ ಹೆಚ್ಚು ಮಕ್ಕಳನ್ನು ಪೋಷಣೆ ಮಾಡಲಾಗುತ್ತಿದೆ. ಕೋವಿಡ್-19 ಕಾರಣದಿಂದಾಗಿ ಮಕ್ಕಳನ್ನು ಪೋಷಕರ ಆಶ್ರಯಕ್ಕೆ ನೀಡಲಾಗಿದೆ. ಈ ಕೇಂದ್ರಗಳ ನಿರ್ವಹಣೆಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುದಾನ ನೀಡಲಾಗುತ್ತಿದೆ ಎಂದು  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಸಭೆಗೆ ಮಾಹಿತಿ ನೀಡಿದರು. 

ಕೊರೋನ ಸೋಂಕು ತಡೆಗೆ ಜಿಲ್ಲಾಡಳಿತ ಈಗಾಗಲೇ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, ಜನತೆಯಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಇದರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ವಿವಿಧ ಇಲಾಖಾಧಿಕಾರಿಗಳಿಗೆ ಇದೇ ವೇಳೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ  ಡಾ.ಆರ್.ಜಿ.ಆನಂದ್ ಸೂಚನೆ ನೀಡಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್, ಜಿಲ್ಲಾ ಸರ್ಜನ್ ಡಾ.ಮೋಹನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮುದ್ದಣ್ಣ, ಆರೋಗ್ಯಾಧಿಕಾರಿ ಡಾ.ಭರತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News