ಪತ್ರಕರ್ತರ ಆರೋಗ್ಯ ಸೇವೆಗೆ ಆಯುಷ್ಮಾನ್ ಯೋಜನೆ ಸಹಕಾರಿ: ಡಾ.ಪಿ.ಎಸ್.ಹರ್ಷ

Update: 2020-10-17 18:39 GMT

ಬೆಂಗಳೂರು, ಅ.17: ಸರಕಾರ ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಸೇವೆಯನ್ನು ಜಾರಿಗೆ ತಂದಿದೆ ಎಂದು ವಾರ್ತಾ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಶನಿವಾರ ವಾರ್ತಾ ಇಲಾಖೆಯ ರಾಮನಗರ ಜಿಲ್ಲಾ ಕಚೇರಿಗೆ ಭೇಟಿ ನೀಡಿದ ಅವರು, ಮಾಧ್ಯಮದವರಿಗೆ ನೀಡುವ ಆಯುಷ್ಮಾನ್ ಆರೋಗ್ಯ ಕಾರ್ಡ್ ಸೇರಿದಂತೆ ಕಚೇರಿಯ ಕಡತಗಳನ್ನು ಪರಿಶೀಲಿಸಿದರು. ನಂತರ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ಕಾರ್ಡ್ ವಿತರಿಸಿ ಅವರು ಮಾತನಾಡಿದರು.

ಸಮಾಜದ ಒಳಿತಿಗಾಗಿ ಜೀವನ ನಡೆಸುವ ಮಾಧ್ಯಮದವರು, ಸುದ್ದಿಗಳನ್ನು ಕಲೆ ಹಾಕಲು ದಿನವಿಡೀ ಶ್ರಮಿಸುತ್ತಾರೆ. ಸದಾ ಒತ್ತಡ ಜೀವನದಿಂದಾಗಿ ಆರೋಗ್ಯ ಸಮಸ್ಯೆ ಎದುರಾಗುವುದು ಸಾಮನ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರ ಆರೋಗ್ಯ ಸೇವೆಗೆ ಆಯುಷ್ಮಾನ್ ಯೋಜನೆ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಅರ್ಹ ಪತ್ರಕರ್ತರಿಗೆ ಪಿಂಚಣಿಯನ್ನು ಖಜಾನೆಯಿಂದ ಪಾವತಿಸಲಾಗುತ್ತಿತ್ತು. ಈಗ ವಾರ್ತಾ ಇಲಾಖೆಯಿಂದಲೇ ನೇರವಾಗಿ ಪಾವತಿಸಲಾಗುತ್ತಿದೆ. ಪಿಂಚಣಿ ಪಾವತಿಗೂ ಮೊದಲು ನಿಗದಿಪಡಿಸಿರುವ ದಾಖಲೆಗಳನ್ನು ಪಡೆದುಕೊಂಡು ಪಾವತಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯುವ ಯುವ ಅಭ್ಯರ್ಥಿಗಳು ಕಲಿಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ತರಬೇತಿಯ ಅವಧಿಯಲ್ಲಿಯೇ ಸರಕಾರಿ ಇಲಾಖೆಗಳೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸಿ ಉತ್ತಮ ಲೇಖನಗಳನ್ನು ಬರೆಯಬೇಕೆಂದು ಅವರು ಸಲಹೆ ನೀಡಿದರು. ಈ ವೇಳೆ ಹಿರಿಯ ಸಹಾಯಕ ನಿರ್ದೇಶಕ ಸಿ.ಆರ್.ನವೀನ್ ಸೇರಿದಂತೆ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News