ಸರಕಾರದ ಆದಾಯ ಕಡಿಮೆಯಾಗಿದ್ದರಿಂದ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ರದ್ದಾಗಲಿ: ಕುಂ.ವೀರಭದ್ರಪ್ಪ

Update: 2020-10-18 14:07 GMT

ಕಲಬುರಗಿ, ಅ.18: ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮ ರಾಜ್ಯ ಸರಕಾರದ ಆದಾಯ ಕಡಿಮೆಯಾಗಿರುವುದರಿಂದ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ರದ್ದು ಮಾಡಬೇಕೆಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಕೋರಿದ್ದಾರೆ.

ರವಿವಾರ ನಗರದ ರಂಗಾಯಣದಲ್ಲಿ ನಡೆದ ಸಾಹಿತ್ಯ ಸಾರಥ್ಯ ಮೂರನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲೂ ರಾಜ್ಯೋತ್ಸವ ಪ್ರಶಸ್ತಿಗಾರಿ ಸರಥಿ ಸಾಲಿನಲ್ಲಿ ನಿಂತಿರುವುದು ವಿಷಾದದ ಸಂಗತಿಯಾಗಿದೆ. ಇಂತಹ ಮನಸ್ಥಿತಿಯಿಂದಾಗಿಯೇ ರಾಜ್ಯೋತ್ಸವ ಪ್ರಶಸ್ತಿಯನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬರಹಗಾರರ ಬಾಯಿಯನ್ನು ಕಟ್ಟಿಹಾಕಲು, ಪ್ರತಿರೋಧಗಳನ್ನು ಇಲ್ಲವಾಗಿಸಲು ಸರಕಾರಗಳು ಪ್ರಶಸ್ತಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಇದರಿಂದ ಬರಹಗಾರರಲ್ಲಿ ನಿವೀರ್ಯತೆ, ನಿಷ್ಕ್ರೀಯತೆ ಉಂಟಾಗಬಹುದು. ಹೀಗಾಗಿ ಸರಕಾರ ನೀಡುವ ಪ್ರಶಸ್ತಿಗಳ ಬಗ್ಗೆ ಸಣ್ಣ ಅನುಮಾನ ಇಟ್ಟುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. ವ್ಯವಸ್ಥೆಯ ವಿರುದ್ಧ ಮಾತನಾಡುವ, ಬರೆಯುವ ಸಾಹಿತ್ಯವೇ ಶ್ರೇಷ್ಢ ಸಾಹಿತ್ಯವಾಗುತ್ತದೆ. ಲೇಖಕ ವಿರೋಧ ಪಕ್ಷದ ಧುರೀಣನಾಗರಿಬೇಕೆಂದು ಅವರು ತಿಳಿಸಿದ್ದಾರೆ. 

ಈ ವೇಳೆ ಖಜೂರಿ ಮಠದ ಕೋರಣೇಶ್ವರ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವರಾಯ ದೊಡ್ಡಮನಿ, ಸಿದ್ದರಾಮ ಹೊನ್ಕಲ್, ಸಂಧ್ಯಾ ಹೊನಗುಂಟಿಕರ, ಡಾ.ನಾಗೇಂದ್ರ ಮಸೂತಿ, ಎನ್.ಎನ್.ದಂಡಿನಕುಮಾರ, ಪಿ.ಎ.ಮಠ, ಮಹೇಶ ಬಡಿಗೇರ, ಮುಹಮ್ಮದ್ ಅಯಾಝುದ್ದೀನ್, ಎಚ್.ಎಸ್.ಬೇನಾಳಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News