ನೀಟ್ ಪರೀಕ್ಷೆ: ದನ ಕಾಯುವವನ ಮಗ ಸರಕಾರಿ ಶಾಲಾ ವಿದ್ಯಾರ್ಥಿಗಳ ಪೈಕಿ ದೇಶಕ್ಕೇ ಪ್ರಥಮ

Update: 2020-10-19 04:08 GMT

ಥೇಣಿ(ತಮಿಳುನಾಡು), ಅ.19: ದನ ಕಾಯುವವನ ಮಗನೊಬ್ಬ ವೈದ್ಯಕೀಯ ಪದವಿ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಅಮೋಘ ಸಾಧನೆ ಮಾಡಿದ್ದಾನೆ. ಜೀವಿತ್ ಕುಮಾರ್ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಪೈಕಿ ಇಡೀ ದೇಶಕ್ಕೇ ಟಾಪರ್ ಆಗಿದ್ದಾರೆ.

ಥೇಣಿ ಜಿಲ್ಲೆಯ ದನಗಾಹಿ ಮತ್ತು ನರೇಗಾ ಫಲಾನುಭವಿ ದಂಪತಿಯ ಜೀವಿತ್ ಕುಮಾರ್ ಈ ಅಮೋಘ ಸಾಧನೆ ಮಾಡಿಯೂ, ಹಣಕಾಸು ತೊಂದರೆಯಿಂದಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯವ ಸ್ಥಿತಿಯಲ್ಲಿಲ್ಲ. ಈತ ಸಿಲ್ವರ್‌ಪಟ್ಟಿ ಪೆರಿಯಾಕುಲಂ ಸರಕಾರಿ ಮಾದರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದು, ತನ್ನ ಎರಡನೇ ಪ್ರಯತ್ನದಲ್ಲಿ 720ರ ಅಂಕಗಳ ಪೈಕಿ 664 ಅಂಕ ಗಳಿಸಿದ್ದಾನೆ.

ಆದರೆ ಸರಕಾರಿ ಕಾಲೇಜುಗಳ ಶುಲ್ಕ ಕೂಡಾ ಕುಟುಂಬಕ್ಕೆ ನಿಲುಕದಷ್ಟು ಅಧಿಕ ಇರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣದ ಕನಸು ನನಸಾಗುವ ಸಾಧ್ಯತೆ ಇಲ್ಲ ಎಂದು ಜೀವಿತ್‌ಕುಮಾರ್ ನಿರಾಶೆ ವ್ಯಕ್ತಪಡಿಸುತ್ತಾನೆ.

"ನನಗೆ ವೈದ್ಯನಾಗುವ ಗುರಿ ಇರಲಿಲ್ಲ. ಆದರೆ ಈ ಕಠಿಣವಾದ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂಬ ಆಸೆ ಇತ್ತು. ಇದೀಗ ನಾನು ಎಂಬಿಬಿಎಸ್ ಮಾಡಲು ಬಯಸಿದ್ದೇನೆ. ಆದರೆ ಖಾಸಗಿ ಕಾಲೇಜು ಬಿಡಿ; ಸರಕಾರಿ ಕಾಲೇಜಿನ ಶುಲ್ಕವನ್ನು ಪಾವತಿಸುವ ಸ್ಥಿತಿಯಲ್ಲೂ ನಮ್ಮ ಕುಟುಂಬ ಇಲ್ಲ. ನನ್ನ ಓದು ಮುಂದುವರಿಸಲು ಜನರ ನೆರವು ಯಾಚಿಸುತ್ತಿದ್ದೇನೆ" ಎಂದು ಹೇಳಿದ್ದಾನೆ.

ನೀಟ್ ಸಿದ್ಧತೆಯ ಕೋಚಿಂಗ್‌ಗೆ ನೋಂದಾಯಿಸಿಕೊಳ್ಳಲು ನೆರವಾದ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾನೆ. ಕಳೆದ ವರ್ಷ ಪರೀಕ್ಷೆ ಎಷ್ಟು ಕಷ್ಟ ಇರುತ್ತದೆ ಎಂದು ತಿಳಿದುಕೊಳ್ಳುವ ಸಲುವಾಗಿ ಪರೀಕ್ಷೆ ಬರೆದಿದ್ದೆ. ನಾನು ಮತ್ತೆ ಬರೆಯುವ ಆಸೆ ವ್ಯಕ್ತಪಡಿಸಿದಾಗ ನೀಟ್ ಕೋಚಿಂಗ್‌ಗೆ ಸೇರಲು ಶಿಕ್ಷಕರು ನೆರವಾದರು. 664 ಅಂಕ ಪಡೆದು, ದೇಶದಲ್ಲೇ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಪೈಕಿ ಅಗ್ರಸ್ಥಾನ ಗಳಿಸುವುದು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.

ಜೀವಿತ್‌ಕುಮಾರ್ ತಾಯಿ ಪರಮೇಶ್ವರಿ ನರೇಗಾ ಫಲಾನುಭವಿ. ಮಗನ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಶಿಕ್ಷಕರ ನೆರವು ಮತ್ತು ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿದರು. ಜೀವಿತ್ 10 ಮತ್ತು 12ನೇ ತರಗತಿಯಲ್ಲಿ ನಮ್ಮ ಕುಟುಂಬದಲ್ಲೇ ಅತ್ಯಧಿಕ ಅಂಕ ಪಡೆದ ಪ್ರತಿಭಾವಂತ. ನಾವು ಆತನ ಸಾಧನೆಯಿಂದ ಎಷ್ಟು ಖುಷಿಯಾಗಿದ್ದೇವೆ ಎಂದರೆ ಈಗಾಗಲೇ ಆತ ವೈದ್ಯನಾದಷ್ಟು ಖುಷಿಯಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News