ರಾಜ್ಯದಲ್ಲಿ ಶೀಘ್ರವೇ ಕಾಲೇಜು ಆರಂಭ: ಡಿಸಿಎಂ ಡಾ.ಅಶ್ವತ್ಥನಾರಾಯಣ

Update: 2020-10-19 09:32 GMT

 ಮೈಸೂರು, ಅ.19:  ಕಾಲೇಜುಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರಕಾರ ಮತ್ತು ಯುಜಿಸಿಯಿಂದ ಈಗಾಗಲೇ ರಾಜ್ಯಕ್ಕೆ ಸ್ಪಷ್ಟವಾದ ಮಾರ್ಗಸೂಚಿ ಬಂದಿದೆ. ಆ ಹಿನ್ನೆಲೆಯಲ್ಲಿ ಎಲ್ಲ ಮೂಲಭೂತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ಕಾಲೇಜುಗಳನ್ನು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸೋಮವಾರ ಬೆಳಗ್ಗೆ ಚಾಮುಂಡಿ ದರ್ಶನ ಪಡೆದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ಎಲ್ಲ ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಆಫ್‌ಲೈನ್‌ ತರಗತಿಗಳು ಆರಂಭವಾಗಬೇಕು ಎಂಬುದು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. ಹೀಗಾಗಿ ಸರಕಾರವು ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದೆ. ಆದಷ್ಟು ಬೇಗ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಡಿಸಿಎಂ ಹೇಳಿದರು.

ನೆರೆ ವಿಚಾರವಾಗಿ ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ

ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ. ಹೀಗಾಗಿ ಸಿದ್ದರಾಮಯ್ಯ ಸರಕಾರದ ರಾಜೀನಾಮೆ ಕೇಳುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ನೆರೆ ವಿಷಯವನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ. ನೆರೆಯಲ್ಲೂ ರಾಜಕೀಯ ಮಾಡಬೇಕಾದ ಕರ್ಮ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದು  ಕುಟುಕಿದರು.

ಎನ್‌ಡಿಆರ್‌ಎಫ್‌ ಮಾನದಂಡವನ್ನು ಎಲ್ಲ ರಾಜ್ಯಗಳು ಒಪ್ಪಿಕೊಂಡಿವೆ. ಅದರ ನಿಯಮಗಳಂತೆ ರಾಜ್ಯಕ್ಕೂ ಕೇಂದ್ರದಿಂದ ನೆರವು ಬಂದಿದೆ. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲೇ ಹಣ ಬಂದಿದೆ. ಹತ್ತು ವರ್ಷ ಆಡಳಿತ ನಡೆಸಿದ್ದ ಯುಪಿಎ ಸರಕಾರ ರಾಜ್ಯದಲ್ಲಿ ನೆರೆ ಬಂದಾಗಲೆಲ್ಲ ಎಷ್ಟು ನೆರವು ನೀಡಿತ್ತು ಎಂಬುದನ್ನು ಕಾಂಗ್ರೆಸ್‌ ನಾಯಕರು ಮಾಹಿತಿ ಪಡೆಯಲಿ ಎಂದು ಡಿಸಿಎಂ ಹೇಳಿದರು.

ಗೆಲುವು ಬಿಜೆಪಿಯದ್ದೇ:

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಜನರಿಗೆ ಸ್ಥಿರ ಸರಕಾರ ಬೇಕಿದೆ. ಆ ನಿಟ್ಟಿನಲ್ಲಿ ಜನರು ಆಲೋಚನೆ ಮಾಡುತ್ತಿದ್ದಾರೆ. ಹಿಂದೆ ಜನರು ಅನೇಕ ಸಲ ಅವಕಾಶ ಕೊಟ್ಟಿದ್ದರು. ಸಿಕ್ಕ ಅವಕಾಶಗಳನ್ನು ಕಾಂಗ್ರೆಸ್‌ ಮತ್ತಿ ಜೆಡಿಎಸ್‌ ಹಾಳು ಮಾಡಿಕೊಂಡರು. ಇನ್ನೂ ಅಂಥ ಪಕ್ಷಗಳಿಗೆ ಮತ ಹಾಕಿ ಪ್ರಯೋಜನವಿಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ ಎಂದು ಡಿಸಿಎಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News