ಹಿಡ್ಲುಮನೆ ಜಲಪಾತದ 80 ಅಡಿ ಆಳದಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

Update: 2020-10-19 06:51 GMT

ಶಿವಮೊಗ್ಗ, ಅ.19: ಹೊಸನಗರ ತಾಲೂಕಿನ ಕೊಡಚಾದ್ರಿಯಲ್ಲಿರುವ  ಹಿಂಡ್ಲೆಮನೆ ಫಾಲ್ಸ್ ನೋಡಲು ಬಂದಿದ್ದ ಪ್ರವಾಸಿಗನೊಬ್ಬ ಸುಮಾರು 80 ಅಡಿಗಳ ಆಳದಲ್ಲಿ ಸಿಲುಕಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಸತತ ಐದು ಗಂಟೆಗಳ ಕಾರ್ಯಾಚರಣೆ ನಡೆಸಿದ ಆಗ್ನಿಶಾಮಕ ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಹಾಸನ ಮೂಲದ ಅಮೋಘ್ (29) ಅಪಾಯದಿಂದ ಪಾರಾದ ಯುವಕ. ಅಮೋಘ್ ತನ್ನ ಸ್ನೇಹಿತರಾದ ತಮಿಳುನಾಡು ಮೂಲದ ಸಂಜೀವ್, ಜೈಪುರ ಮೂಲದ ಮಧು ಎಂಬುವರ ಜೊತೆ ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದರು. ಇಂದು ಮುಂಜಾನೆ ಕೊಡಚಾದ್ರಿ ಬೆಟ್ಟ ಹತ್ತಿದ ಅಮೋಘ್ ಸ್ನೇಹಿತರು ನೇರವಾಗಿ ಹಿಂಡ್ಲುಮನೆ ಫಾಲ್ಸ್‌ಗೆ ತೆರಳಿದ್ದಾರೆ. ಈ ವೇಳೆ ಅಮೋಘ್ ಫಾಲ್ಸ್‌ ಪಕ್ಕದಲ್ಲೇ ಇಳಿಯುವ ದುಸ್ಸಾಹಸ ಮಾಡಲು ಹೋಗಿ ಸುಮಾರು 80 ಅಡಿ  ಎತ್ತರದಲ್ಲಿ ಸಿಲುಕಿಕೊಂಡಿದ್ದರು. ಅಲ್ಲಿಂದ ಮೇಲಕ್ಕೆ ಏರಲೂ ಆಗದೇ, ಇಳಿಯಲು ಆಗದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ತತಕ್ಷಣ ಇದನ್ನು ಗಮನಿಸಿದ ಈತನ ಸ್ನೇಹಿತರು  ಸಹಾಯಕ್ಕಾಗಿ ಕೂಗಿದ್ದಾರೆ.
ಒಂಟಿ ಕಾಲಿನ ನಿಂತು ಪ್ರಾಣ ಉಳಿಸಿಕೊಂಡ:
ದುಸ್ಸಾಹಸ ಮಾಡಲು ಹೋದ ಆಮೋಘ್ ಸ್ವಲ್ಪ ಮಿಸುಕಾಡಿದರೂ, ಪ್ರಾಣಪಕ್ಷಿ ಹಾರಿಹೋಗುವ ಆಪಾಯ ಎದುರಾಗಿತ್ತು. ಸುಮಾರು 80 ಅಡಿ  ಎತ್ತರದಲ್ಲಿ ಸಿಲುಕಿದ್ದ ಈತನನ್ನು ರಕ್ಷಣೆ ಮಾಡಲು ಅಗ್ನಿಶಾಮಕ ದಳ ಹರಸಾಹಸ ಪಡಬೇಕಾಯಿತು. ಕಾರ್ಯಾಚರಣೆ ವೇಳೆ ಆತ ಸುಮಾರು ಎರಡು ಗಂಟೆಗಳ ಕಾಲ ಒಂದೇ ಕಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿಯಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ವನ್ಯಜೀವಿ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನಿಂದ ಸತತ ಐದು ಗಂಟೆ ಕಾರ್ಯಾರಣೆ ನಡೆಸಿ ಆಮೋಘನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News