ಪ್ರಧಾನಿ ಭಾಷಣದ ವೇಳೆ 'ಮಾತು ಸಾಕು, ಕೆಲಸ ಬೇಕು' ಎಂದು ಆಗ್ರಹಿಸಿ ವಿದ್ಯಾರ್ಥಿಗಳಿಂದ ಧರಣಿ

Update: 2020-10-19 07:55 GMT

ಮೈಸೂರು, ಅ.19: ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ ನೂರನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಭಾಷಣದ ವೇಳೆ ''ಮಾತು ಸಾಕು ಕೆಲಸ ಬೇಕು'' ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪಕೋಡ ಮಾರುವ ಮೂಲಕ ಧರಣಿ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರಧಾನಿಯ ವರ್ಚುವಲ್ ಭಾಷಣ ಆರಂಭವಾಗುತ್ತಿದ್ದಂತೆ ಇತ್ತ ವಿದ್ಯಾರ್ಥಿಗಳು ಪಕೋಡ ಮಾರಿ ವಿನೂತನವಾಗಿ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವ ಸಲಹೆಗಾರ ಮಹೇಶ್ ಸೋಸಲೆ, ಪ್ರಧಾನಿ ನರೇಂದ್ರ ಮೋದಿ ಎರಡು ಕೋಟಿ ಉದ್ಯೊಗ ನೀಡುತ್ತೇನೆ ಎಂಬ ಭರವಸೆ ನೀಡಿ ವಿದ್ಯಾರ್ಥಿಗಳು ಮತ್ತು ಯುವ ಸಮೂಹದ ಮತಗಳನ್ನು ಸೆಳೆದು  45 ವರ್ಷಗಳಲ್ಲೇ ದಾಖಲೆಯ ನಿರುದ್ಯೋಗ ಸೃಷ್ಟಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ 'ಪಕೋಡ ಮಾರಿ' ಎಂದು ಬಿಟ್ಟಿ ಸಲಹೆ ನೀಡಿ ವಿದ್ಯಾರ್ಥಿ ಸಮುದಾಯವನ್ನು ಅವಮಾನಿಸಿದ್ದಾರೆ. ಕೆಲ ತಿಂಗಳ ಹಿಂದೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ ಎಂಬ ಆತ್ಮನಿರ್ಭರದ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ನೈಜ ಇತಿಹಾಸವನ್ನು ತಿರುಚಿ ಪಠ್ಯ ಪುಸ್ತಕಗಳನ್ನು ಕೇಸರೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿದ್ಯಾರ್ಥಿ ಮತ್ತು ಯುವ ಸಮೂಹಗಳ ನಿರೀಕ್ಷೆಗಳನ್ನು ಉಸಿಗೊಳಿಸಿದ್ದಷ್ಟೆ ಅಲ್ಲದೆ ಅವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.

ಧರಣಿಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಂದೇಶ್, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಬಿ.ಎಂ., ಕಾರ್ಯದರ್ಶಿ ದಿಲೀಪ್, ಕೀರ್ತಿ ಪ್ರಸಾದ್, ಶಶಿಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News