ಮುಖ್ಯಮಂತ್ರಿ ಚಂದ್ರು, ನ್ಯಾ.ಎಚ್.ಬಿಲ್ಲಪ್ಪ ಸಹಿತ ಐವರಿಗೆ ಮುರುಫಾಶ್ರೀ ಪ್ರಶಸ್ತಿ

Update: 2020-10-19 10:45 GMT

ಚಿತ್ರದುರ್ಗ, ಅ. 19: ಶ್ರೀ ಮುರುಘರಾಜೇಂದ್ರ ಮಠದ ಶರಣಸಂಸ್ಕತಿ ಉತ್ಸವದಂಗವಾಗಿ ನೀಡುವ ಮುರುಘಾಶ್ರೀ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ.

ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿಗೆ ಭಾಜನರಾದವರ ಹೆಸರುಗಳನ್ನು ಪ್ರಕಟಿಸಿದರು.

ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ನಟ ಮುಖ್ಯಮಂತ್ರಿ ಚಂದ್ರು, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ಬಸವತತ್ವ ಪ್ರಚಾರಕ ಹುಲುಸೂರು ಗುರುಬಸವೇಶ್ವರ ಮಠದ ಶಿವಾನಂದ ಸ್ವಾಮೀಜಿ, ಸ್ವರ್ಣಾ ಭಟ್ ನೇತೃತ್ವದ ಸುರತ್ಕಲ್‌ನ ಮದ್ಯಪಾನ ವಿರೋಧಿ ಆಂದೋಲನ ಸಮಿತಿ ಹಾಗೂ ಚಿತ್ರದುರ್ಗದ ಎಸ್. ನಿಜಲಿಂಗಪ್ಪ ಟ್ರಸ್ಟ್‌ನ ಧರ್ಮದರ್ಶಿ ಎಸ್. ಷಣ್ಮುಖಪ್ಪ ಅವರು ಈ ಬಾರಿಯ ‘ಮುರುಘಾಶ್ರೀ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದವರು ತಿಳಿಸಿದರು.

ಅದೇರೀತಿ ‘ಭರಮಣ್ಣ ನಾಯಕ ಶೌರ್ಯ’ ಪ್ರಶಸ್ತಿಗೆ ಹರಿಯಾಣದ ಜಾಹ್ನವಿ ಪನ್ವಾರ್‌ರನ್ನು ಆಯ್ಕೆ ಮಾಡಲಾಗಿದೆ. 17 ವರ್ಷದ ಬಾಲಕಿಯಾಗಿರುವ ಜಾಹ್ನವಿ ಹತ್ತು ಭಾಷೆಗಳಲ್ಲಿ ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದವರು ಹೇಳಿದರು.

 ಮುರುಘಾಶ್ರೀ ಹಾಗೂ ಭರಮಣ್ಣನಾಯಕ ಶೌರ್ಯ ಪ್ರಶಸ್ತಿಯು 25 ಸಾವಿರ ರೂ.ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಅ.24ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಶರಣರು ಮಾಹಿತಿ ನೀಡಿದರು.

ಕೊರೋನ ಕಾರಣದಿಂದಾಗಿ ಶ್ರೀ ಮುರುಘರಾಜೇಂದ್ರ ಮಠದಿಂದ ಅ.22ರಿಂದ 28ರವರೆಗೆ ತಾವಿದ್ದಲ್ಲಿಯೇ ಶರಣಸಂಸ್ಕತಿ ಉತ್ಸವವನ್ನಾಗಿ ಆಚರಿಸಲಾಗುತ್ತದೆ. ಜಾನಪದ ಕಲಾಮೇಳ, ಕುಸ್ತಿ ಪಂದ್ಯಾವಳಿ, ಜಮುರಾ ಕ್ರೆಡಾಕೂಟ ಮೊದಲಾದ ಜನ ಸೇರುವ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ್ದು, ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಭಕ್ತಾದಿಗಳು ಯುಟ್ಯೂಬ್ ಹಾಗು ಫೇಸ್‌ಬುಕ್‌ಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿ, ಶ್ರೀ ತಿಪ್ಪೇರುದ್ರ ಸ್ವಾಮಿ, ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಟಿ.ಎಸ್.ಎನ್.ಜಯಣ್ಣ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಪಟೇಲ್ ಶಿವಕುಮಾರ್, ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಎಸ್.ಷಣ್ಮುಖಪ್ಪ, ರೆ.ಫಾ.ರಾಜು, ಗಾಯತ್ರಿ ಶಿವರಾಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News