ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ : ಸಚಿವ ಡಾ.ಸುಧಾಕರ್‌

Update: 2020-10-19 09:43 GMT

ಬೆಂಗಳೂರು, ಅ.19: ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವುದರಿಂದ ಅಗತ್ಯ ಮುನ್ನೇಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ.

ಪ್ರವಾಹಪೀಡಿತ ಗ್ರಾಮಗಳು, ಸ್ಥಳಾಂತರಗೊಂಡಿರುವ ಗ್ರಾಮಗಳು, ಸಂತ್ರಸ್ತರಿಗೆ ತೆರಿದಿರುವ ಕಾಳಜಿ ಕೇಂದ್ರಗಳ ಬಳಿ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಿರುವ ಸಿದ್ಧತೆಗಳ ಬಗ್ಗೆ ಬಾಗಲಕೋಟ, ವಿಜಯಪುರ, ಕಲಬುರಗಿ, ಯಾದಗಿರಿ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳ ಜಿಲ್ಲಾಡಳಿತಗಳ ಜತೆ ಸಚಿವರು ಸೋಮವಾರ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.

ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಒಟ್ಟು155 ಗ್ರಾಮಗಳು ಜಲಾವೃತಗೊಂಡಿದ್ದು 55 ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲಾದ್ಯಂತ ಹಾನಿಗೊಳಗಾದ ಗ್ರಾಮಗಳ 23,250 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 27 ಗ್ರಾಮಗಳಲ್ಲಿ ಪ್ರವಾಹದಿಂದ ಹಾನಿಯಾಗಿದೆ. ದುರದೃಷ್ಟವಶಾತ್‌ ಒಂದು ಸಾವಾಗಿದೆ. ಈ ಜಿಲ್ಲೆಯಲ್ಲಿ 1861 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಕಾಳಜಿ ಕೇಂದ್ರಗಳನ್ನು ತೆರೆಯುವ ಪರಿಸ್ಥಿತಿ ಉದ್ಭವಿಸಿಲ್ಲ ಎಂದು ಸಚಿವರು ವಿವರಿಸಿದರು.

ಕಾಳಜಿ ಕೇಂದ್ರಗಳಲ್ಲಿ ಆಶ್ರಯಪಡೆದಿರುವ ಸಂತ್ರಸ್ತರಿಗೆ ಶುದ್ಧಕುಡಿಯುವ ನೀರು ಮತ್ತು ಗುಣಮಟ್ಟದ ಆಹಾರ ಪೂರೈಸಬೇಕು. ಒಂದು ವೇಳೆ ಶುದ್ಧಕುಡಿಯುವ ನೀರಿನ ಘಟಕಗಳು ಸಮೀಪದಲ್ಲಿ ಇಲ್ಲದಿದ್ದರೆ ಲಭ್ಯವಿರುವ ನೀರನ್ನೇ ಕಾಯಿಸಿ, ಶೋಧಿಸಿ ನೀಡಲು ಸೂಚಿಸಲಾಗಿದೆ. ಈಗಾಗಲೇ ಕಾಳಜಿ ಕೇಂದ್ರಗಳಲ್ಲಿರುವವರಿಗೆ ನೀಡಬೇಕಿರುವ ಆಹಾರದ ಬಗ್ಗೆ ರಾಜ್ಯ ಸರಕಾರದಿಂದ ಮೆನು ನೀಡಲಾಗಿದೆ. ಕೇಂದ್ರಗಳ ಒಳಗೆ ಮತ್ತು ಹೊರಭಾಗದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಪ್ರತಿದಿನ ರೋಗ ನಿರೋಧಕ ದ್ರಾವಣ ಸಿಂಪಡಿಸಬೇಕು, ಕೇಂದ್ರದಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕು ಮತ್ತು ಅವರಿಗೆ ಕೋವಿಡ್‌ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ತಜ್ಞರು ಅರಿವು ಮೂಡಿಸುವ ಕೆಲಸ ಮಾಡಲು ಆದೇಶಿಸಲಾಗಿದೆ ಎಂದು ಸಚಿವರು ತಿಳಸಿದರು.

ಹಿರಿಯ ನಾಗರಿಕರು, ಬಾಣಂತಿಯರು, ಗರ್ಭಿಣಿಯರು ಮತ್ತು ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ ಅಥವಾ ತಾಲ್ಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ವಿಶೇಷ ಕಾಳಜಿಯಿಂದ ಅವರನ್ನು ನೋಡಿಕೊಳ್ಳಬೇಕು. ಜ್ವರ ಹಾಗೂ ಇತರೆ ರೋಗಲಕ್ಷಣ ಇದ್ದವರಿಗೆ ತಕ್ಷಣ ಕೋವಿಡ್‌ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಕಾಳಜಿಕೇಂದ್ರಗಳಲ್ಲಿರುವ ಎಲ್ಲರಿಗೂ ಮಾಸ್ಕ್‌ ವಿತರಿಸಬೇಕು, ಸ್ಯಾನಿಟೈಸರ್‌ನೀಡುವ ಜತೆಗೆ ಶುಚಿತ್ವಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜತೆಗೆ ಕಡ್ಡಾಯವಾಗಿ ಭೌತಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಪರಿಸ್ಥಿತಿ ನಿಯಂತ್ರಣದಲ್ಲಿದೆ:

ಕಳೆದ ವರ್ಷಗಳಿಗೆ ಹೋಲಿಸಿದರೆ ಡೆಂಗಿ, ಚಿಕುನ್‌ಗುನ್ಯಾ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಹರಡುವಿಕೆ ಈ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಮುಂದಿನ ಎರಡು ತಿಂಗಳಲ್ಲಿ ಅನೇಕ ಹಬ್ಬ ಹರಿದಿನಗಳ ಆಚರಣೆ ಹೆಚ್ಚು. ಜತೆಗೆ ಕೋವಿಡ್‌ ಆತಂಕ ಇರುವ ಹಿನ್ನೆಲೆಯಲ್ಲಿ ವಿಶೇಷ ಗಮನಹರಿಸಿ ಪರಿಸ್ಥಿತಿ ನಿಭಾಯಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾಳಜಿ ಕೇಂದ್ರಗಳ ಸಮೀಪದಲ್ಲಿ ಪಿಎಚ್‌ಸಿ ಅಥವಾ ಇತರೆ ಆರೋಗ್ಯ ಸೌಲಭ್ಯಗಳು ಇಲ್ಲದಿದ್ದರೆ ಸಂಚಾರಿ ಆರೋಗ್ಯ ಘಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದರು.

ಸೇನೆ ನೆರವಿಗೆ ಕೃತಜ್ಞತೆ :

ಪ್ರವಾಹದಿಂದ ಹಾನಿಗೀಡಾದ ಗ್ರಾಮಗಳಲ್ಲಿ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗಿರುವ ಸೇನೆಯ ಯೋಧರು, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದ ಸಚಿವರು, ಇವರ ಸಕಾಲಿಕ ನೆರವಿನಿಂದ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ಜತೆಗೆ ಸಂತ್ರಸ್ತರಿಗೆ ಅಗತ್ಯ ನೆರವು ಸಿಕ್ಕಿದೆ ಎಂದು ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರ ಸೇವೆಯನ್ನು ಶ್ಲಾಘಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News