ಆರೋಪಿಯಾಗಿಸಬೇಕಾದರೆ ಮೊದಲು ಅರ್ನಬ್ ಗೆ ಸಮನ್ಸ್ ನೀಡಿ: ಮುಂಬೈ ಪೊಲೀಸರಿಗೆ ಬಾಂಬೆ ಹೈಕೋರ್ಟ್

Update: 2020-10-19 11:30 GMT

ಮುಂಬೈ: ಟಿ ಆರ್ ಪಿ ತಿರುಚಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಸೇರಿಸುವ ಪ್ರಸ್ತಾವವಿದ್ದರೆ ಅವರಿಗೆ ಮೊದಲು ಸಮನ್ಸ್ ಜಾರಿಗೊಳಿಸುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ. 

ನ್ಯಾಯಮೂರ್ತಿಗಳಾದ ಎಸ್ಎಸ್ ಶಿಂಧೆ ಹಾಗೂ ಎಂಎಸ್ ಕಾರ್ನಿಕ್ ಅವರನ್ನೊಳಗೊಂಡ ನ್ಯಾಯಪೀಠವು ಗೋಸ್ವಾಮಿ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಅಂತಹ ಸಮನ್ಸ್ ಬಂದರೆ ಅವರು ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತಾರೆ ಎಂದು ಸಾಳ್ವೆ ತಿಳಿಸಿದರು.

ಎಆರ್ಜಿ ಔಟ್ಲೈಯರ್ ಮೀಡಿಯಾ ಲಿಮಿಟೆಡ್(ರಿಪಬ್ಲಿಕ್ ಟಿವಿ ಹಾಗೂ ಆರ್ ಭಾರತ್ನ್ನು ನಡೆಸುತ್ತಿರುವ ಕಂಪೆನಿ)ಹಾಗೂ ಅರ್ನಬ್ ಗೋಸ್ವಾಮಿ ಅವರು ಸಲ್ಲಿಸಿದ ರಿಟ್ ಅರ್ಜಿಯ ಕುರಿತು ನ್ಯಾಯಪೀಠ ನೋಟಿಸ್ ನೀಡಿತು. ಅರ್ಜಿಯ ಅಂತಿಮ ವಿಚಾರಣೆಯನ್ನು ನವೆಂಬರ್ 5 ರಿಂದ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸಲು ನ್ಯಾಯಪೀಠ ಒಪ್ಪಿದೆ.

ನವೆಂಬರ್ 4 ರಂದು ಮೊಹರು ಮಾಡಿದ ಕವರ್ನಲ್ಲಿ ತನಿಖಾ ಪತ್ರಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿತು. ಮುಂದಿನ ವಿಚಾರಣೆಯ ತನಕ ಅರ್ನಬ್ ಗೋಸ್ವಾಮಿ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸುವಂತೆ ಗೋಸ್ವಾಮಿ ಪರ ವಕೀಲರು ಮಾಡಿದ ಮನವಿಯನ್ನು ಮನ್ನಿಸದ ನ್ಯಾಯಾಲಯ, ಗೋಸ್ವಾಮಿಯನ್ನು ಪ್ರಕರಣದಲ್ಲಿ ಇನ್ನೂ ಆರೋಪಿಯನ್ನಾಗಿ ಹೆಸರಿಸದಿದ್ದಾಗ ಈ ಹಂತದಲ್ಲಿ ಅಂತಹ ಆದೇಶವನ್ನು ನೀಡುವುದು ಹೇಗೆ? ಎಂದು ಪ್ರಶ್ನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News