ಹತ್ರಸ್ 'ಷಡ್ಯಂತ್ರ' ಆರೋಪ ಹೊತ್ತು ಬಂಧನದಲ್ಲಿರುವ ಕೇರಳ ಪತ್ರಕರ್ತನ ಭೇಟಿಗೆ ಅವಕಾಶ ನೀಡದ ಮಥುರಾ ನ್ಯಾಯಾಲಯ

Update: 2020-10-19 10:56 GMT
 ಪತ್ರಕರ್ತ ಸಿದ್ದೀಖ್ ಕಪ್ಪನ್

ಹೊಸದಿಲ್ಲಿ: ಹತ್ರಸ್ 'ಷಡ್ಯಂತ್ರ' ಪ್ರಕರಣದಲ್ಲಿ ಬಂಧಿತರಾಗಿ ಮಥುರಾ ಕಾರಾಗೃಹದಲ್ಲಿರುವ ಕೇರಳ ಪತ್ರಕರ್ತ ಸಿದ್ದೀಖ್ ಕಪ್ಪನ್ ಅವರನ್ನು ಭೇಟಿಯಾಗಲು ಅನುಮತಿ ಕೋರಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿರುವ ಅಪೀಲನ್ನು ಮಥುರಾ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಂಜು ರಾಜಪುತ್ ತಿರಸ್ಕರಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಂದೆ ಬಾಕಿಯಿರುವ ಕಪ್ಪನ್ ಅವರ ಅಪೀಲಿನಲ್ಲಿ ಸ್ವಲ್ಪ ತಿದ್ದುಪಡಿ ತರುವ ಉದ್ದೇಶದಿಂದ ಸಂಘವು ಕಪ್ಪನ್ ಅವರನ್ನು ಭೇಟಿಯಾಗಲು ಅನುಮತಿ ಕೋರಿತ್ತು. ಇದಕ್ಕಾಗಿ ಸಂಘದ ವಕೀಲ ವಿಲ್ಸ್ ಮ್ಯಾಥ್ಯೂಸ್ ಕೂಡ ಆಗಮಿಸಿದ್ದರೂ ಅನುಮತಿ ದೊರಕಿಲ್ಲ.

ಕಪ್ಪನ್ ಅವರ ಬಂಧನದ ನಂತರ ಅವರ 90 ವರ್ಷದ ತಾಯಿ, ಪತ್ನಿ ಹಾಗೂ ಮಕ್ಕಳು ಅಧೀರರಾಗಿದ್ದು ಅವರೊಂದಿಗೆ ಫೋನ್‍ನಲ್ಲಿ ಮಾತನಾಡಲು ಬಯಸಿದ್ದಾರೆಂದು ಸಂಘ ಹೇಳಿತ್ತು. ಈ ಹಿಂದೆ ಕುಟುಂಬದ ಜತೆ ದೂರವಾಣಿಯಲ್ಲಿ ಮಾತನಾಡಲೂ ಅನುಮತಿ ನಿರಾಕರಿಸಲಾಗಿತ್ತು ಹಾಗೂ ಕಪ್ಪನ್ ಅವರ ತಾಯಿಯ ಸ್ಥಿತಿ ಕಪ್ಪನ್ ಬಂಧನದ ನಂತರ ಹದಗೆಟ್ಟಿದೆ ಎಂದು ಸಂಘ ತನ್ನ ಅಪೀಲಿನಲ್ಲಿ ಹೇಳಿತ್ತು.

ಮೂವತ್ತು ನಿಮಿಷಗಳ ಕಾಲ ಭೇಟಿಗೆ ಅವಕಾಶ ಕೋರಿ ವಕೀಲರೊಂದಿಗೆ ಸಂಘದ ಪದಾಧಿಕಾರಿಗಳಾದ ಪಿ ಕೆ ಮಣಿಕಂಠನ್, ಪ್ರಶಾಂತ್ ಎಂ ನಾಯರ್ ಹಾಗೂ ಅನಿಲ್ ವಿ ಆನಂದ್ ಮನವಿ  ಮಾಡಿದ್ದರು. ಕುಟುಂಬದೊಂದಿಗೆ ವಾಟ್ಸ್ಯಾಪ್ ವೀಡಿಯೋ ಮೂಲಕವಾದರೂ ಮಾತನಾಡಲೂ ಅವಕಾಶ ನೀಡಿ ಎಂಬ ಮನವಿಯನ್ನೂ ತಳ್ಳಿ ಹಾಕಲಾಗಿದೆ.

ಹತ್ರಸ್ ಪ್ರಕರಣದ ಕುರಿತು ವರದಿ ಮಾಡಲೆಂದು ಅಕ್ಟೋಬರ್ 5ರಂದು ಹತ್ರಸ್‍ಗೆ ತೆರಳುತ್ತಿದ್ದ ವೇಳೆ ಕಪ್ಪನ್ ಅವರನ್ನು ಬಂಧಿಸಲಾಗಿತ್ತು.

ಕಪ್ಪನ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಐಟಿ ಕಾಯಿದೆ ಹಾಗೂ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯಡಿಯೂ ಪ್ರಕರಣ ದಾಖಲಿಸಿರುವುದರಿಂದ ಸುಪ್ರೀಂ ಕೋರ್ಟಿಗೆ ಈ ಹಿಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ತಿದ್ದುಪಡಿ ತರಲು ಬಯಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News