ಪ್ರವಾಹ ಪೀಡಿತ ಗ್ರಾಮದಿಂದ ತಾಯಿ- ಮಗುವನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದ ಪಿಎಸ್ಐ

Update: 2020-10-19 11:59 GMT

ಕಲಬುರಗಿ, ಅ.19: ಭೀಮಾ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ಪಕ್ಕದಲ್ಲಿರುವ ಗ್ರಾಮಗಳು ಮುಳುಗಡೆಯಾಗಿದ್ದು, ಗ್ರಾಮದ ತಾಯಿ- ಮಗುವನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಲು ಪೊಲೀಸ್ ಅಧಿಕಾರಿಯೊಬ್ಬರು ನೆರವಾಗಿದ್ದಾರೆ.

ಭಾರೀ ಮಳೆಯಿಂದ ಭೀಮಾನದಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ ಪಕ್ಕದಲ್ಲಿರುವ ಗ್ರಾಮಗಳು ಮುಳುಗಡೆಯಾಗಿವೆ. ಈ ಗ್ರಾಮದಲ್ಲಿರುವ ಸಾರ್ವಜನಿಕರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗುತ್ತಿದೆ. ಇಂದು ಗ್ರಾಮದ ತಾಯಿ ಮತ್ತು ಮಗುವನ್ನು ಜೇವರ್ಗಿ ತಾಲೂಕನ ಕ್ರೈಂ ವಿಭಾಗದ ಪಿಎಸ್ಐ ಸಂಗಮೇಶ ಅವರು ಸುರಕ್ಷಿತ ಸ್ಥಳಕ್ಕೆ ಸೇರಿಸಿದ್ದಾರೆ.

ಸಂಗಮೇಶ್ ಅಂಗಡಿಯವರು ಮಗುವನ್ನು ಎತ್ತಿಕೊಂಡು ತಾಯಿ ಮತ್ತು ಅವರ ಸಂಬಂಧಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ದೃಶ್ಯದ ವಿಡಿಯೋ ಇದೀಗ ವೈರಲ್ ಆಗಿದೆ.

ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕೆಂದು ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್ ರೊಟ್ಟಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಸೇವೆಗೆ ನಾವು ಸದಾ ಸಿದ್ಧರಾಗಿದ್ದೇವೆ. ನಿಮ್ಮ ಸುರಕ್ಷತೆಗಾಗಿ ನಮ್ಮ ಎಲ್ಲಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ದಯವಿಟ್ಟು ನದಿ ಅಕ್ಕಪಕ್ಕದಲ್ಲಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ.

ಕ್ರೈಂ ವಿಭಾಗದ ಪಿಎಸ್ಐ ಸಂಗಮೇಶ್ ಅಂಗಡಿಯವರ ಕಾರ್ಯಕ್ಕೆ ರಮೇಶ್ ರೊಟ್ಟಿ ಹಾಗೂ ಎಸ್ಪಿ ಡಾ.ಸೀಮಿ ಮರಿಯಮ್ ಜಾರ್ಜ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News