ಯಡಿಯೂರಪ್ಪ ಸರಕಾರದಲ್ಲಿ ಲಂಚ ನೀಡದೆ ನಯಾಪೈಸೆ ಬಿಡುಗಡೆ ಆಗಲ್ಲ: ಸಿದ್ದರಾಮಯ್ಯ

Update: 2020-10-19 12:24 GMT

ಬೆಂಗಳೂರು/ಬೆಳಗಾವಿ, ಅ. 19: `ಪ್ರವಾಹ ಪರಿಸ್ಥಿತಿ ಇರುವಾಗ ವೈಮಾನಿಕ ಸಮೀಕ್ಷೆ ಮಾಡುವುದು ಸರಿ. ಆದರೆ, ಈಗ ಪ್ರವಾಹ ಪೀಡಿತ ಸ್ಥಳಗಳಿಗೆ ರಸ್ತೆ ಮೂಲಕ ಸಂಚರಿಸಲು, ನಿರಾಶ್ರಿತ ಕೇಂದ್ರಗಳಲ್ಲಿರುವ ಜನರನ್ನು ಭೇಟಿ ಮಾಡಲು ಅವಕಾಶವಿದ್ದಾಗ್ಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಮಾನದಲ್ಲೇ ಸಮೀಕ್ಷೆ ಮಾಡಿದರೆ ಜನರ ಕಷ್ಟ ಏನು ಅಂತ ಹೇಗೆ ತಿಳಿಯುತ್ತೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕಳೆದ ವರ್ಷದ ಆಗಸ್ಟ್ ನಲ್ಲಿ, ಈ ಬಾರಿಯ ಆಗಸ್ಟ್ ನಲ್ಲಿ, ಮತ್ತೆ ಅಕ್ಟೋಬರ್ ನಲ್ಲಿ ರಾಜ್ಯದಲ್ಲಿ ಪ್ರವಾಹ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಒಮ್ಮೆಯಾದರೂ ರಾಜ್ಯಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳಿದ್ದಾರಾ ? ಬಿಜೆಪಿಯ 25 ಸಂಸದರನ್ನು ರಾಜ್ಯದಿಂದ ಆರಿಸಿ ಕಳಿಸಿರುವುದೇ ಮೋದಿ ಅವರು ಕರ್ನಾಟಕವನ್ನು ಇಷ್ಟು ತಾತ್ಸಾರ ಮಾಡಲು ಕಾರಣ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ನಳೀನ್ ಕುಮಾರ್ ಕಟೀಲ್ ಅವರೇ, ರಾಜ್ಯದಲ್ಲಿ ರೈತರು, ನೇಕಾರರು, ಕೂಲಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಇದನ್ನು ತಡೆಯಲು ತಾವೇನು ಮಾಡಿದ್ದೀರಿ? ಮೊದಲು ಜನರಿಗೆ ಲಾಕ್‍ಡೌನ್ ಮತ್ತು ಪ್ರವಾಹದಿಂದ ಉಂಟಾದ ನಷ್ಟವನ್ನು ತುಂಬಿಕೊಡುವ ವ್ಯವಸ್ಥೆ ಮಾಡಿ. ನಿಮ್ಮ ಭಾಷಣದಿಂದ ಜನರ ಹೊಟ್ಟೆ ತುಂಬಲ್ಲ' ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.

`ಕಳೆದ ವರ್ಷದ ಪ್ರವಾಹದಲ್ಲಿ ಬಿದ್ದ ಮನೆಗಳನ್ನೇ ಕಟ್ಟಿಸಿಕೊಟ್ಟಿಲ್ಲ. ಈ ವರ್ಷದ ಪ್ರವಾಹದಲ್ಲಿ ಇನ್ನಷ್ಟು ಮನೆಗಳು ಬಿದ್ದಿವೆ. ಜಿಲ್ಲಾಧಿಕಾರಿಗಳಿಗೆ ದುಡ್ಡು ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳ್ತಾರೆ. ಅವರ ಪಿಡಿ ಖಾತೆಯಲ್ಲಿ ದುಡ್ಡಿದ್ದರೆ ಸಂತ್ರಸ್ತರಿಗೆ ತಲುಪುತ್ತಾ? ಈ ವರ್ಷ ಯಾರಿಗಾದರೂ ಪರಿಹಾರ ಕೊಟ್ಟಿದ್ದಾರಾ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

`ಕೇಂದ್ರ ತಂಡ ರಾಜ್ಯದ ಪ್ರವಾಹ ಸಮೀಕ್ಷೆ ನಡೆಸಿ ಇಷ್ಟು ದಿನವಾಯ್ತಲ್ಲ, ಒಂದು ರೂಪಾಯಿಯಾದ್ರೂ ಪರಿಹಾರ ಬಂದಿದೆಯಾ? ಕಂದಾಯ ಸಚಿವ ಆರ್.ಅಶೋಕ್ ಅವರು ಪರಿಹಾರ ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತನೇ ದಿನ ದೂಡುತ್ತಿದ್ದಾರೆ. ಜನ ಕಷ್ಟದಲ್ಲಿರುವಾಗ ಪರಿಹಾರ ಕೊಡದೆ ಯಾವಾಗ ಕೊಡ್ತೀರ?' ಎಂದು ಸಿದ್ದರಾಮಯ್ಯ, ರಾಜ್ಯ ಸರಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಲಂಚ ನೀಡದೆ ನಯಾಪೈಸೆ ಬಿಡುಗಡೆ ಆಗ್ತಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಅವರದು ಪರ್ಸಂಟೇಜ್ ಸರಕಾರ. ಲಂಚ ನೀಡದೆ ಇಲ್ಲಿ ನಯಾಪೈಸೆ ಬಿಡುಗಡೆಯಾಗಲ್ಲ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೊಸ ಅನುದಾನವಂತೂ ಇಲ್ಲ, ಇದರ ಜೊತೆಗೆ ಹಿಂದೆ ಘೋಷಿಸಿದ್ದ ಅನುದಾನವನ್ನೂ ತಡೆಹಿಡಿಯಲಾಗಿದೆ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅವುಗಳಿಗೆ ಹಣ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಅವರನ್ನು ಕೇಳಿದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಇಲಾಖೆಗೆ ನಯಾಪೈಸೆ ಹಣ ಕೊಟ್ಟಿಲ್ಲ ಅಂತಾರೆ. ಸರಕಾರ ದಿವಾಳಿಯಾಗಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?' ಎಂದು ಸಿದ್ದರಾಮಯ್ಯ ಕೇಳಿದರು.

ತಾನಿರುವ ಹುದ್ದೆಯ ಗೌರವದ ಅರಿವಿಲ್ಲದ ನಳೀನ್ ಕುಮಾರ್ ಕಟೀಲು ಒಬ್ಬ ಯಕಶ್ಚಿತ್ ರಾಜಕಾರಣಿ. ಬೆಂಕಿ ಹಾಕೋದು, ಸಮುದ್ರಕ್ಕೆ ಬಿಸಾಕೋದು ಬರೀ ಇಂತಹುದನ್ನೇ ತಲೆಯಲ್ಲಿ ತುಂಬಿಕೊಂಡಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು ತನ್ನನ್ನು ಮುಳುಗಿಸ್ತೇನೆ ಎಂದು ಬಂದ ಬಹಳಷ್ಟು ಜನರನ್ನು ನೋಡಿದೆ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಮ್ಮ ಸರಕಾರ ಪ್ರಾರಂಭಿಸಿದ್ದ ಯೋಜನೆಗಳನ್ನೆಲ್ಲ ಒಂದೊಂದಾಗಿ ನಿಲ್ಲಿಸ್ತಿದ್ದಾರೆ. ಅನ್ನಭಾಗ್ಯದ ಅಕ್ಕಿಯನ್ನು 7 ಕೆ.ಜಿಯಿಂದ 5ಕ್ಕೆ ಇಳಿಸಿದ್ದಾರೆ. ಇಂದಿರಾ ಕ್ಯಾಂಟೀನ್‍ಗೆ ದುಡ್ಡು ಕೊಡದೆ ಮುಚ್ಚಲು ಹೊರಟಿದ್ದಾರೆ. ದನ-ಕುರಿ ಸತ್ತರೆ ಪರಿಹಾರ ಕೊಡ್ತಿಲ್ಲ, ಕ್ಷೀರಧಾರೆಯಲ್ಲಿ ಹಾಲಿನ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಕೃಷಿಭಾಗ್ಯವೂ ನಿಂತಿದೆ' ಎಂದು ಟೀಕಿಸಿದರು.

ಅಮಾಯಕರನ್ನು ಕೊಂದ ಸರಕಾರ: `ನಮ್ಮ ಕಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೀಗಿತ್ತಾ? ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಗೋಲಿಬಾರ್ ನಡೆಸಿ ರೈತರನ್ನು ಕೊಂದರು, ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಎರಡು ಬಾರಿ ಗೋಲಿಬಾರ್ ನಡೆಸಿ ಅಮಾಯಕರನ್ನು ಕೊಂದರು. ಇದು ಕಾನೂನು ಮತ್ತು ಸುವ್ಯವಸ್ಥೆನಾ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಉಪಚುನಾವಣೆಯಲ್ಲಿ ಆರ್.ಆರ್.ನಗರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಸ್ಪರ್ಧೆಯಿದ್ದರೆ, ಶಿರಾದಲ್ಲಿ ತ್ರಿಕೋನ ಸ್ಪರ್ಧೆಯಿದೆ. ಎರಡೂ ಕ್ಷೇತ್ರಗಳ ಜನರ ಒಲವು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕಂಡುಬರುತ್ತಿರುವುದರಿಂದ ಎರಡರಲ್ಲೂ ಗೆಲ್ಲುವ ಹೆಚ್ಚಿನ ಅವಕಾಶವಿರುವುದು ನಮ್ಮ ಪಕ್ಷಕ್ಕೆ

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News