ಪದೇ ಪದೇ ನನ್ನನ್ನು ಕೆಣಕಬೇಡಿ: ಸಿದ್ದರಾಮಯ್ಯರಿಗೆ ಕುಮಾರಸ್ವಾಮಿ ಎಚ್ಚರಿಕೆ

Update: 2020-10-19 12:34 GMT
File Photo

ಬೆಂಗಳೂರು, ಅ. 19: `ಜನರನ್ನ ಮರಳು ಮಾಡಲು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳು ಇಲ್ಲ. ಹೀಗಾಗಿ ಅವರು ಹಳೆಯದನ್ನ ಮತ್ತೆ ಕೆದಕಿಕೊಂಡು ಹೊರಟಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಟೀಕಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಾಮಾಜಿಕ-ಆರ್ಥಿಕ (ಜಾತಿ) ಸಮೀಕ್ಷೆ ಬಿಡುಗಡೆಗೆ ಕುಮಾರಸ್ವಾಮಿ ಅಡ್ಡಗಾಲು ಹಾಕಿದರು ಎಂಬ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡ. ಸಿದ್ದರಾಮಯ್ಯಗೆ ನಿನ್ನೆ ರಾತ್ರಿ ಕನಸು ಬಿತ್ತೇ ? ನನ್ನ ವಿರುದ್ದ ಟೀಕೆ ಮಾಡುವುದಕ್ಕೆ ಬೇರೆ ವಿಚಾರಗಳು ಇಲ್ಲ' ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಸಮನ್ವಯ ಸಮತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಇದ್ದರು. ಒಂದು ದಿನವೂ ಸಾಮಾಜಿಕ-ಆರ್ಥಿಕ ಸಮೀಕ್ಷೆ ವಿಚಾರವನ್ನು ಚರ್ಚೆಯೇ ಮಾಡಿಲ್ಲ. ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಮಂತ್ರಿಗಳು ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇದೀಗ ಏಕೆ ಸುಳ್ಳು ಹೇಳುತ್ತಿದ್ದಾರೆ. ಬೇರೆ ವಿಚಾರಗಳು ಅವರ ಬಳಿ ಇಲ್ಲ. ಹೀಗಾಗಿ ನನ್ನ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದೀಗ ಹಿಂದುಳಿದವರ ಬಗ್ಗೆ ಇವರಿಗೆ ಪ್ರೀತಿ ಬಂದಿದೆ. ಪದೇ ಪದೇ ನನ್ನನ್ನ ಕೆಣಕಬೇಡಿ ಎಂದು ಎಚ್ಚರಿಕೆ ಕೊಡ್ತಿದ್ದೇನೆ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ತೆವಲಿಗೆ ಸಮಾಜಗಳನ್ನ ನನ್ನ ವಿರುದ್ದ ಎತ್ತಿಕಟ್ಟಿದ್ದೀರಿ ಎಂಬುದು ಗೊತ್ತಿದೆ. ರಾಜಕೀಯದ ತೆವಲು ತೀರಿಸಿಕೊಳ್ಳಲು ಹೊರಟಿದ್ದೀರಿ. ಇದು ಬಹಳ ದಿನ ನಡೆಯೊಲ್ಲ. ಏಕೆ ನನ್ನನ್ನ ಕೆಣಕುತ್ತೀರಾ. ಅವತ್ತು ನಿಮಗೆ ಜವಾಬ್ದಾರಿ ಇರಲಿಲ್ಲವಾ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಆವತ್ತು ನಾನು ವಿರೋಧ ಮಾಡಿದ್ದರೆ ಅವತ್ತೆ ಬೆಂಬಲ ವಾಪಸ್ ಪಡೆಯಬೇಕಿತ್ತು. ಇದೀಗ ಈಶ್ವರಪ್ಪನಿಗೆ ನಮೋ ನಮೋ ಅಂತಿದ್ದೀರಾ? ಸಿದ್ದರಾಮಯ್ಯಗೆ ನನ್ನ ಭಯ ಇದೆ. ಜನರಿಂದ ಮತ್ತೆ ಮೇಲೆ ಬರುತ್ತೇನೆ ಎನ್ನುವ ಸೂಚನೆ ಅವರಿಗೆ ಇದೆ. ಈಗ ನನಗೆ ಹಿನ್ನಡೆ ಆಗಿರಬಹುದು. ಆದರೆ ಈ ರಾಜ್ಯದ ಜನ ಜಾತಿ-ಭೇದ ಮರೆತು ಮತ್ತೆ ಕುಮಾರಸ್ವಾಮಿ ಬೇಕು ಅನ್ನೊ ದಿನಗಳು ಬರುತ್ತವೆ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಕಣ್ಣಿಗೆ ಕಾಣ್ತಿಲ್ಲ. ಜೆಡಿಎಸ್ ಮಾತ್ರ ಕಾಣ್ತಿದೆ. ಅವರಿಗೆ ಜೆಡಿಎಸ್ ಮುಗಿಸಬೇಕು. ಯಾಕಂದ್ರೆ ಅವ್ರನ್ನ ಬೆಳೆಸಿದ್ವಿ ಅಲ್ಲವಾ ಆ ತಪ್ಪಿಗೆ. ಹೀಗಾಗಿ ನನ್ನ ಬಗ್ಗೆ ಸಿದ್ದರಾಮಯ್ಯ ಪದೇ ಪದೇ ಮಾತಾಡೋದು ಬೇಡ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News