ಪಂಚಮಸಾಲಿ ಜನಾಂಗವನ್ನು ಪ್ರವರ್ಗ 2ಎಗೆ ಸೇರಿಸದಿದ್ದರೆ ಉಗ್ರ ಹೋರಾಟ: ಜಯಮೃತ್ಯುಂಜಯ ಶ್ರೀ ಎಚ್ಚರಿಕೆ

Update: 2020-10-19 12:41 GMT

ಬಾಗಲಕೋಟೆ, ಅ.19: ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವ ಕಾರ್ಯದಲ್ಲಿ ಪಂಚಮಸಾಲಿ ಸಮುದಾಯದ ಪಾತ್ರ ಬಹುದೊಡ್ಡದಿದೆ. ಹೀಗಾಗಿ, ಈ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಶ್ರೀ ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಶೇ.70ರಷ್ಟು ಮಂದಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸಿಎಂ ಅವರು ಸಮಾಜದ ಋಣ ತೀರಿಸುವ ವಿಶ್ವಾಸವಿದೆ ಎಂದು ಹೇಳಿದರು.

ಪಂಚಮಸಾಲಿ ಸಮುದಾಯದವರು ಸೌಮ್ಯ ಸ್ವಭಾವದವರು ಎಂಬ ಕಾರಣಕ್ಕೆ ಈ ಹಿಂದೆ ಬಂದ ಎಲ್ಲ ಸರಕಾರಗಳೂ ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿವೆ. ಆದರೆ, ನಾವು ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು. ಹೋರಾಟ ಮಾಡಿಯಾದರೂ ನಮ್ಮ ಹಕ್ಕುಗಳನ್ನು ನಾವು ಪಡೆಯುತ್ತೇವೆ ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯ ಸೇರಿ ಲಿಂಗಾಯತ ಸಮುದಾಯದ 42 ಉಪ ಪಂಗಡಗಳನ್ನು 2ಎಗೆ ಪ್ರವರ್ಗಕ್ಕೆ ಸೇರಿಸುವ ಬೇಡಿಕೆಗೆ 2012ರಲ್ಲಿ ಆಗಿನ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಅದೇ ರೀತಿಯಾಗಿ ಪ್ರಸ್ತುತ ಆಡಳಿತದಲ್ಲಿರುವ ಸರಕಾರ ಈ ಕೂಡಲೇ ಸಿ.ಎಂ.ಉದಾಸಿ ಸಮಿತಿ ವರದಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಸದ್ಯ ಪ್ರವರ್ಗ 2ಎನಲ್ಲಿರುವ ದೊಡ್ಡ ಜನಾಂಗ ಹಾಲಮತದವರು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಇಟ್ಟಿದ್ದಾರೆ. ವಾಲ್ಮೀಕಿ ಸಮುದಾಯದ ಬೇಡಿಕೆಯಂತೆ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಸಾರವಾಗಿ ಹೆಚ್ಚಳಗೊಳಿಸಿ ಹಾಲುಮತ ಸಮಾಜದವರ ಆಶಯವನ್ನು ಈಡೇರಿಸಲಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News