ಮೈಸೂರು ವಿವಿ 100ನೇ ಘಟಿಕೋತ್ಸವ: 29,018 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ

Update: 2020-10-19 13:02 GMT

ಮೈಸೂರು,ಅ.19: ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವ ಸಮಾರಂಭವು ಸೋಮವಾರ ವರ್ಚುವಲ್ ಕಾರ್ಯಕ್ರಮದ ಮೂಲಕ ಮೈಸೂರು ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆಯಿತು.

ಕ್ರಾಫರ್ಡ್ ಭವನದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ಕುಲಪತಿ ಪ್ರೊ.ಹೇಮಂತ್ ಕುಮಾರ್, ಕುಲ ಸಚಿವರು ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. 29,018 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. ಮೈಸೂರು ವಿವಿಯಲ್ಲಿ ಪುರುಷರೇ ಮೇಲುಗೈ ಸಾಧಿಸಿದ್ದು, 18,344 (ಶೇ.63.21) ವಿದ್ಯಾರ್ಥಿಗಳು, 10,674 (ಶೇ.36.78) ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಗಿದೆ.

ಅಗ್ರಿ ಬಿಸನೆಸ್ ವಿಭಾಗದಲ್ಲಿ ಮನೋಜ್ ರಂಜನ್ ಅವರಿಗೆ 'ಡಿಲಿಟ್' ನೀಡಿ ಗೌರವಿಸಲಾಗಿದೆ. 654 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನಿಸಲಾಗಿದ್ದು, 264 ಮಹಿಳೆ, 390 ಪುರುಷರಿಗೆ ಪಿಎಚ್‍ಡಿ ಪದವಿ ಪ್ರದಾನಿಸಲಾಗಿದೆ. ಒಟ್ಟು 392 ಪದಕ, 198 ಬಹುಮಾನ ನೀಡಲಾಗಿದೆ. 7,971 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 20,393 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರಧಾನ ಮಾಡಲಾಯಿತು. 

ಇನ್ಫೋಷಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಅನುಪಸ್ಥಿತಿಯಲ್ಲಿ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಪ್ರದಾನ ಮಾಡುತ್ತಿರುವುದಾಗಿ ಹೇಳಿದರು.
ಸಮಾಜ ಸೇವೆ, ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಲ್ಲಿ ಸುಧಾಮೂರ್ತಿ ಅವರ ಸೇವೆಯನ್ನು ಇದೇ ವೇಳೆ ಕುಲಪತಿಗಳು ಸ್ಮರಿಸಿದರು. 

ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಏಳು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ವರ್ಣ ಪದಕ ಹಾಗೂ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅತ್ಯುತ್ತಮ ಸಾಧನೆಗೈದಿರುವ ಏಳು ಸ್ನಾತಕೋತ್ತರ  ಪದವಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಹಾಗೂ ನಗದು ಬಹುಮಾನವನ್ನು ಪ್ರದಾನ ಮಾಡಲಾಯಿತು. ಎಂಎ ಕನ್ನಡದಲ್ಲಿ ಮೂವರು ವಿದ್ಯಾರ್ಥಿಗಳು, ಎಂಎಸ್ ಸಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಎಂಎ ಅರ್ಥಶಾಸ್ತ್ರ ಹಾಗೂ ಎಂಬಿಎ ನಲ್ಲಿ ತಲಾ ಒಬ್ಬರು ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಎಂಎ ಕನ್ನಡದಲ್ಲಿ ಸುನೀತಾ 7 ಚಿನ್ನದ ಪದಕ, 5 ನಗದು ಬಹುಮಾನ, ಪಿ.ರೇಣುಕಾ 6 ಚಿನ್ನದ ಪದಕ, 5 ನಗದು ಬಹುಮಾನ, ಕೆ.ಜಿ.ಕೆಂಪರಾಜು 6 ಚಿನ್ನದ ಪದಕ, 4 ನಗದು ಬಹುಮಾನ ಪಡೆದುಕೊಂಡು ಸಂಭ್ರಮಿಸಿದರು.

ಎಂಎಸ್ ಸಿ ರಸಾಯನಶಾಸ್ತ್ರದಲ್ಲಿ ಆರ್.ರೂಪಿಣಿ 11 ಚಿನ್ನದ ಪದಕ, 2 ನಗದು ಬಹುಮಾನ, ಎಂಎಸ್ ಸಿ ಸಸ್ಯಶಾಸ್ತ್ರದಲ್ಲಿ ಎಂ.ಜೆ.ಶಾಲಿನಿ 7 ಚಿನ್ನದ ಪದಕ, 3 ನಗದು ಬಹುಮಾನ ಪಡೆದುಕೊಂಡರು.

ಎಂಎ ಅರ್ಥಶಾಸ್ತ್ರದಲ್ಲಿ ಆರ್.ಧನಲಕ್ಷ್ಮೀ 9 ಚಿನ್ನದ ಪದಕ, 4 ನಗದು ಬಹುಮಾನ ಪಡೆದುಕೊಂಡರೆ, ಎಂಬಿಎ ನಲ್ಲಿ ಮತಂ ತೇಜಸ್ವಿನಿ 5 ಚಿನ್ನದ ಪದಕ ಪಡೆದುಕೊಂಡರು.

ವಿವಿ ಇತಿಹಾಸವನ್ನು ಶ್ಲಾಘಿಸಿದ ಮೋದಿ: ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ
ಮೈಸೂರು ವಿಶ್ವವಿದ್ಯಾಲಯದ ಐತಿಹಾಸಿಕ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.

ಎಲ್ಲರಿಗೂ ಮೈಸೂರು ದಸರಾ, ನಾಡಹಬ್ಬದ ಹೃದಯಪೂರ್ವಕ ಶುಭಾಶಯಗಳು. ಕೆಲವೊಂದು ಛಾಯಾಚಿತ್ರಗಳನ್ನು ಗಮನಿಸುತ್ತಿದ್ದೆ. ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧಗಳಿರಬಹುದು. ಆದರೆ, ಸಂಭ್ರಮದ ಉತ್ಸಾಹಕ್ಕೇನೂ ಕೊರತೆ ಇಲ್ಲ. ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ತೊಂದರೆಯಾಗಿದೆ. ಸಂತ್ರಸ್ತರ ಬಗ್ಗೆ ನನ್ನ ಸಹಾನುಭೂತಿ ಇದೆ. ಕೇಂದ್ರ ಹಾಗೂ ರಾಜ್ಯಗಳು ಪರಿಹಾರ ಕಾರ್ಯದ ಪ್ರಯತ್ನದಲ್ಲಿವೆ. ಮುಖತಃ ಭೇಟಿಯಾಗುವ ನಿರೀಕ್ಷೆ ಆಸೆ ಇತ್ತು. ಕೊರೋನ ಕಾರಣ ಅದು ನೆರವೇರಿಲ್ಲ. ಆದಾಗ್ಯೂ, ನಾವು ವರ್ಚುವಲ್ ರೂಪದಲ್ಲಿ ಎಲ್ಲರೂ ಜತೆಯಾಗುತ್ತಿದ್ದೇವೆ ಎಂದರು. 

ಇದೇ ವೇಳೆ ಮೈಸೂರು ವಿವಿ ಇತಿಹಾಸವನ್ನು ಶ್ಲಾಘಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯನ್ನು ಕೊಂಡಾಡಿದ ಮೋದಿ ಕೊರೋನ ಹಿನ್ನೆಲೆಯಲ್ಲಿ ಘಟಿಕೋತ್ಸವ ವರ್ಚವಲ್ ಆಗಿ ನಡೆಯುತ್ತಿರುವುದಕ್ಕೆ ಕೊಂಚ ಬೇಸರ ವ್ಯಕ್ತಪಡಿಸಿದರು.

ಘಟಿಕೋತ್ಸವದ ಈ ಸ್ಮರಣೀಯ ಸಮಾರಂಭದ ಸಂದರ್ಭದಲ್ಲಿ ನಿಮಗೆಲ್ಲರಿಗೂ ಅಭಿನಂದನೆಗಳು. ಈ ಸಂದರ್ಭದಲ್ಲಿ ಪದವಿ ಪ್ರಮಾಣ ಪತ್ರ ಪಡೆಯುತ್ತಿರುವ ಎಲ್ಲರಿಗೂ ಶುಭಾಶಯಗಳು. ಬೋಧಕ ಸಿಬ್ಬಂದಿಗೂ ಶುಭಾಶಯಗಳನ್ನು ಕೋರುತ್ತೇನೆ ಎಂದು ಕನ್ನಡದಲ್ಲಿಯೇ ನುಡಿದರು.

ಮೈಸೂರು ವಿವಿ ಪ್ರಾಚೀನ ಭಾರತದ ಸಮೃದ್ಧ ಶಿಕ್ಷಣ ವ್ಯವಸ್ಥೆಯ ಹಾಗೂ ಭವಿಷ್ಯ ಶಿಕ್ಷಣಕ್ಕೆ ಮಾರ್ಗದರ್ಶನ ಮಾಡಬಲ್ಲ ಒಂದು ಪ್ರಮುಖ ಕೇಂದ್ರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಸಂಕಲ್ಪಗಳನ್ನು ಸಾಕಾರಗೊಳಿಸಿರುವ ವಿಶ್ವವಿದ್ಯಾಲಯವಿದು. ಇಂದಿನ ಈ ದಿನಕ್ಕೆ ಸರಿಯಾಗಿ 102 ವರ್ಷ ಹಿಂದೆ ಇದೇ ದಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯ ಮೊದಲ ಘಟಿಕೋತ್ಸವ ಭಾಷಣ ಮಾಡಿದ್ದರು. ಅಂದಿನಿಂದ ಇಂದಿನ ತನಕ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡಿದ ಅನೇಕ ರತ್ನಗಳು ಪದವಿ ದೀಕ್ಷೆ ಪಡೆದ ಸಂದರ್ಭಕ್ಕೆ ಈ ರತ್ನಗರ್ಭ ಪ್ರಾಂಗಣವು ಸಾಕ್ಷಿಯಾಗಿದೆ. ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಈ ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಹೊಸ ಪ್ರೇರಣೆಯನ್ನು ನೀಡಿದ್ದಾರೆ. ಅದೇ ರೀತಿ ಇಂದು ಇಲ್ಲಿ ನೆರೆದಿರುವ ಎಲ್ಲರ ಬಗ್ಗೆಯೂ ನಮಗೆ ವಿಶ್ವಾಸವಿದೆ. ನಿರೀಕ್ಷೆಯೂ ಹೆಚ್ಚಾಗಿದೆ. ಇಂದು ನಿಮ್ಮ ಪದವಿ ಪ್ರಮಾಣದೊಂದಿಗೆ ವಿಶ್ವವಿದ್ಯಾಲಯ, ಇಲ್ಲಿನ ಪ್ರಾಧ್ಯಾಪಕರು ನಿಮ್ಮ ಮೇಲೆ ಸಮಾಜದ ಹೊಣೆಗಾರಿಕೆಯನ್ನೂ ನಿಮ್ಮ ಮೇಲೆ ಹೊರಿಸಿದ್ದಾರೆ. ಶಿಕ್ಷಣ ಮತ್ತು ದೀಕ್ಷೆಗಳೆರಡು ವಿದ್ಯಾರ್ಥಿ ಜೀವನದ ಎರಡು ಪ್ರಮುಖ ಘಟ್ಟಗಳು. ಸಾವಿರಾರು ವರ್ಷಗಳನ್ನು ಗಮನಿಸಿದೆ. ನಮ್ಮಲ್ಲೊಂದು ಪರಂಪರೆ ಇದೆ. ನಾವು ಯಾವಾಗ ದೀಕ್ಷೆಯ ಮಾತುಗಳನ್ನಾಡುತ್ತೇವೆಯೋ ಅದು ಕೇವಲ ಪದವಿ ಪಡೆಯುತ್ತಿರುವ ಸಂದರ್ಭವಷ್ಟೇ ಅಲ್ಲ. ಇಂದಿನ ಈ ದಿನ ಜೀವನದ ಭವಿಷ್ಯದ ಶಿಕ್ಷಣಕ್ಕಾಗಿ ಹೊಸ ಸಂಕಲ್ಪ ತೆಗೆದುಕೊಳ್ಳಲು ಪ್ರೇರಣೆಯನ್ನು ಕೊಡುತ್ತದೆ. ಇಂದು ನೀವು ಒಂದು ಔಪಚಾರಿಕವಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್ನಿಂದ ಹೊರಬಿದ್ದು, ಬದುಕೆಂಬ ವಿರಾಟ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ತೆರಳುತ್ತಿದ್ದೀರಿ ಎಂದು ಹೇಳಿದರು.

ಈ ಹೊಸ ಕ್ಯಾಂಪಸ್ ಹೇಗಿರಲಿದೆ ಎಂದರೆ ನೀವು ಇದುವರೆಗೆ ಈ ಕ್ಯಾಂಪಸ್ ನಲ್ಲಿ ಏನು ಕಲಿತಿರುವಿರೋ ಅದರ ಅನ್ವಯ ಮಾಡುವುದು ಹೇಗೆಂಬ ಪ್ರಾಯೋಗಿಕ ಅಧ್ಯಯನ ಶುರುವಾಗುತ್ತದೆ. ಮಹಾಲೇಖಕ, ಚಿಂತಕ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು, ಶಿಕ್ಷಣವೇ ಜೀವನದ ಬೆಳಕು ಎನ್ನುವ ಮಾತನ್ನು ಹೇಳಿದ್ದಾರೆ. ಇದರ ಅರ್ಥ ಇಷ್ಟೇ- ಬದುಕಿನ ಸಂಕಷ್ಟದ ಸಂದರ್ಭದಲ್ಲಿ ಬೆಳಕು ನೀಡಬಲ್ಲ ಸಾಧನವೇ ಶಿಕ್ಷಣ. ಇಂದು ನಮ್ಮ ದೇಶ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವಾಗ, ಅವರ ಈ ಮಾತುಗಳು ಹೆಚ್ಚು ಸಕಾಲಿಕವೆನಿಸುತ್ತಿದೆ ಎಂದರು. 

ಪದಕ ಸಿಕ್ಕಿರುವ ಈ ದಿನ ನನ್ನ ಜೀವನದ ಐತಿಹಾಸಿಕ ದಿನ. ನಾನು 11 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಸೇರಿ 13 ಪದಕಗಳನ್ನು ಪಡೆದುಕೊಂಡಿದ್ದೇನೆ. ಈ ಎಲ್ಲಾ ಗೌರವವರನ್ನು ನಮ್ಮ ತಂದೆ, ತಾಯಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗಳಿಗೆ ಅರ್ಪಿಸುತ್ತೇನೆ. ಮೈಸೂರು ವಿಶ್ವವಿದ್ಯಾನಿಯ ನನ್ನ ಅಚ್ಚು ಮೆಚ್ಚಿನ ಸ್ಥಳ. ಮುಂದೆ ಇಲ್ಲಿಯೇ ನಾನು ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದೇನೆ.          
-ಆರ್.ರೂಪಿಣಿ, ಚಿನ್ನದ ಪದಕ ವಿಜೇತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News