ಬಹುತೇಕ ದಲಿತ ದೌರ್ಜನ್ಯ ಪ್ರಕರಣಗಳು ರಾಜಿ ಪಂಚಾಯ್ತಿಗೆ ಸೀಮಿತ: ಹೈಕೋಟ್ ವಕೀಲ ಶಿವಮಣಿ

Update: 2020-10-19 13:18 GMT

ಚಿಕ್ಕಮಗಳೂರು, ಅ.19: ದಲಿತರ ಹಕ್ಕುಗಳ ರಕ್ಷಣೆ, ದೌರ್ಜನ್ಯಗಳ ನಿಯಂತ್ರಣಕ್ಕಾಗಿ ಅಟ್ರಾಸಿಟಿಯಂತಹ ಬಲಿಷ್ಠ ಕಾನೂನುಗಳಿದ್ದರೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಲಿತ ಸಮುದಾಯಗಳಲ್ಲಿ ಈ ಕಾನೂನುಗಳ ಬಗ್ಗೆ ಅರಿವು ಇಲ್ಲದಿರುವುದು ದೌರ್ಜನ್ಯ ಹೆಚ್ಚಲು ಕಾರಣವಾಗಿದೆ. ಕಾನೂನಿನ ಅರಿವಿನ ಕೊರತೆಯಿಂದಾಗಿ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗದಂತಾಗಿದೆ. ಇಂತಹ ಸಂತ್ರಸ್ತರಿಗೆ ಕಾನೂನಿನ ಜಾಗೃತಿ ಹಾಗೂ ನೆರವು ನೀಡುವ ಕೆಲಸವನ್ನು ಪರ್ಯಾಯ ಕಾನೂನು ವೇದಿಕೆ ರಾಜ್ಯಾದ್ಯಂತ ಮಾಡುತ್ತಿದೆ ಎಂದು ಹೈಕೋರ್ಟ್ ವಕೀಲ ಶಿವಮಣಿ ತನ್ ತಿಳಿಸಿದ್ದಾರೆ.

ತಾಲೂಕಿನ ಆವುಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆ ಹಾಗೂ ಜಿಲ್ಲಾ ಸಂವಿಧಾನ ಸಂರಕ್ಷಣಾ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ "ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಿತರಕ್ಷಣೆಗೆ ಇರುವ ಕಾನೂನುಗಳು" ಕಾರ್ಯಕ್ರಮದಲ್ಲಿ ಆವುತಿ ಹೋಬಳಿ ವ್ಯಾಪ್ತಿಯ ದಾನಿಗಳ್ಳಿ, ಆವುತಿ, ನರಿಗುಡ್ಡೆ ಗ್ರಾಮಗಳ ವ್ಯಾಪ್ತಿಯ ಪರಿಶಿಷ್ಟರಿಗೆ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆ, ಪಿಟಿಸಿಎಲ್ ಕಾಯ್ದೆಗಳ ಸಂವಾದ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾಹಿತಿ ನೀಡಿದರು.

ಎಸ್ಸಿ, ಎಸ್ಟಿ ಸಮುದಾಯಗಳ ಹಕ್ಕು ಸಂರಕ್ಷಣೆಗಾಗಿ ಎಷ್ಟೇ ಕಠಿಣವಾದ ಕಾನೂನುಗಳಿದ್ದರೂ ಈ ಸಮುದಾಯದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇದೆ. ಈ ಸಮುದಾಯಗಳ ಜನರಲ್ಲಿ ಕಾನೂನು ಅರಿವಿನ ಕೊರತೆ, ಹಣಕಾಸಿನ ಸಮಸ್ಯೆ, ಸಂಘಟನೆ, ಶಿಕ್ಷಣ ಮತ್ತಿತರ ಸಮಸ್ಯೆಗಳಿಂದಾಗಿ ದೌರ್ಜನ್ಯ ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳು ರಾಜಿ ಪಂಚಾಯ್ತಿಯಲ್ಲೇ ಸಮಾಪ್ತಿಯಾಗುತ್ತಿವೆ. ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ, ತಾರತಮ್ಯ, ಮೇಲ್ವರ್ಗದವರ ಪ್ರಭಾವದಿಂದಾಗಿ ದಲಿತರ ಮೇಲಿನ ನೂರಾರು ಅಮಾನುಷ ದೌರ್ಜನ್ಯ ಪ್ರಕರಣಗಳು ಮುಚ್ಚಿ ಹಾಕಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅನ್ಯಾಯಕ್ಕೊಳಗಾದವರಿಗೆ ಪರ್ಯಾಯ ಕಾನೂನು ವೇದಿಕೆ ಸಂತ್ರಸ್ತರಿಗೆ ಕಾನೂನು ಮಾಹಿತಿ ನೀಡುವುದಲ್ಲದೇ ಪ್ರಕರಣದ ಮರು ತನಿಖೆಗೆ ಮುಂದಾಗುವುದಲ್ಲದೇ, ಸಂತ್ರಸ್ತರ ಕಾನೂನು ಹೋರಾಟಕ್ಕೆ ಸರಕಾರ ಒದಗಿಸಿರುವ ಸೌಲಭ್ಯ, ಆರ್ಥಿಕ ನೆರವಿನ ಬಗ್ಗೆಯೂ ಮಾಹಿತಿ, ನೆರವು ನೀಡಲಿದೆ ಎಂದರು.

ಎಸ್ಸಿ, ಎಸ್ಟಿ ಸಮುದಾಯದವರನ್ನು ಇತರ ಜಾತಿ ಸಮುದಾಯಗಳ ಜನರು ಜಾತಿ ನಿಂದನೆ ಮಾಡುವುದು, ತಲೆ ಬೋಳಿಸುವುದು, ಹೊಲಸು ಸ್ವಚ್ಛ ಮಾಡಲು ಒತ್ತಾಯಿಸುವುದು, ಹತ್ಯೆ, ಅತ್ಯಾಚಾರ, ಜಾಗ ಕಬಳಿಸುವುದೂ ಸೇರಿದಂತೆ ಎಸ್ಸಿ, ಎಸ್ಟಿ ಸಮುದಾಯದವರ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಘಟನೆಗಳ ವಿರುದ್ಧ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಬಹುದು. ಇಂತಹ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರ್ಲಕ್ಷ್ಯ ವಹಿಸಿದರೆ ಅದನ್ನು ಡಿವೈಎಸ್ಪಿ, ಎಸ್ಪಿ, ಡಿಸಿಗೆ ದೂರು ನೀಡಬೇಕು. ಅವರೂ ನಿರ್ಲಕ್ಷ್ಯ ವಹಿಸಿದರೇ ನ್ಯಾಯಾಲಯದಲ್ಲಿ ಖಾಸಗಿಯಾಗಿ ದೂರು ಸಲ್ಲಿಸಬೇಕು. ನ್ಯಾಯಾಲಯ ದೂರು ದಾಖಲು ಮಾಡಲು ಪೊಲೀಸರಿಗೆ ನಿರ್ದೇಶನ ನೀಡುತ್ತದೆ. ದೂರು ದಾಖಲಾದ ಬಳಿಕ ಪೊಲೀಸರು ತನಿಖೆಯನ್ನು ಸಮರ್ಪಕವಾಗಿ ಮಾಡದಿದ್ದಲ್ಲಿ ಪೊಲೀಸರು ವಿರುದ್ಧವೂ ದೂರು ದಾಖಲು ಮಾಡಲು ಈ ಕಾನೂನಿನಲ್ಲಿ ಅವಕಾಶವಿದೆ. ಸಂತ್ರಸ್ತರು ದಲಿತ ದೌರ್ಜನ್ಯ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಎಸ್ಸಿ, ಎಸ್ಟಿ ಕಮೀಶನ್, ಮಾನವ ಹಕ್ಕು ಆಯೋಗದವರೆಗೂ ಮನವಿ ಸಲ್ಲಿಸಲು ಅವಕಾಶವಿದೆ ಎಂದ ಅವರು, ಈ ಕಾನೂನಿನ ಮಾಹಿತಿ ಕೊರತೆಯಿಂದಾಗಿ ಬಹುತೇಕ ದಲಿತ ದೌರ್ಜನ್ಯ ಪ್ರಕರಣಗಳು ರಾಜಿ ಪಂಚಾಯ್ತಿಗೆ ಸೀಮಿತಗೊಳ್ಳುತ್ತಿವೆ. ಕಾನೂನಿನ ಅರಿವು ಹಾಗೂ ಸಂಘಟನೆಯಿಂದ ನ್ಯಾಯ ಪಡೆಯಲು ಸಾಧ್ಯವಿದೆ ಎಂದರು.

ಪರ್ಯಾಯ ಕಾನೂನು ವೇದಿಕೆ ಸಂಚಾಲಕ ಹಾಗೂ ವಕೀಲ ಬಸವ ಪ್ರಸಾದ್ ಕುಲುಲೆ ಮಾತನಾಡಿ, ಶೋಷಣೆ, ದೌರ್ಜನ್ಯಕ್ಕೊಳಗಾದ ಎಸ್ಸಿ, ಎಸ್ಟಿ ಸಮುದಾಯದ ಸಂತ್ರಸ್ತರಿಗೆ ಕಾನೂನು ನೆರವು ನೀಡುವುದರೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ತುಳಿತಕ್ಕೊಳಗಾಗಿರುವವರ ಹಕ್ಕಿಗಾಗಿ ಪರ್ಯಾಯ ಕಾನೂನು ವೇದಿಕೆ ರಾಜ್ಯಾದ್ಯಂತ ಕೆಲಸ ಮಾಡುತ್ತಿದೆ. ರಾಜ್ಯಾದ್ಯಂತ ಜಾತಿಯ ಕಾರಣಕ್ಕೆ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಸಂಘಟನೆ ಶ್ರಮಿಸುತ್ತಿದ್ದು, ದೌಜ್ಯನ್ಯಗಳ ಬಗೆಗಿನ ಮಾಹಿತಿ ಸಂಗ್ರಹಿಸಿ ಸರಕಾರ, ನ್ಯಾಯಾಲಯಗಳಿಗೆ ವರದಿ ನೀಡಲಾಗುತ್ತಿದೆ ಎಂದರು.

ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಸಂತ್ರಸ್ತರಿಗೆ ಸರಕಾರ ಕಲ್ಪಿಸಿರುವ ಸೌಲಭ್ಯ, ಆರ್ಥಿಕ ನೆರವುಗಳ ಬಗ್ಗೆ ಮಾತನಾಡಿದ ವೇದಿಕೆ ಸಂಚಾಲಕ ನರಸಿಂಹಮೂರ್ತಿ, ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಯಾವುದೇ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಪ್ರತೀ ಸಂತ್ರಸ್ತನಿಗೆ ಉಚಿತ ಕಾನೂನು ನೆರವು, ಸಂತ್ರಸ್ತನ ಕುಟುಂಬಕ್ಕೆ ರಕ್ಷಣೆ, ವಿಶೇಷ ನ್ಯಾಯಾಲಯದ ಸೌಲಭ್ಯ ಸೇರಿದಂತೆ ಆರ್ಥಿಕ ನೆರವನ್ನೂ ನೀಡುತ್ತಿದೆ. ಈ ಕಾನೂನಿನಡಿಯಲ್ಲಿ ದಾಖಲಾದ ದೂರಿಗೆ ಎಫ್‍ಐಆರ್ ಆದ ಬಳಿಕ ಸರಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ಆರ್ಥಿಕ ನೆರವಿನ ಶೇ.25ರಷ್ಟನ್ನು ನೀಡುತ್ತದೆ. ಚಾರ್ಜ್‍ಶೀಟ್ ದಾಖಲಾದ ಬಳಿಕ ಶೇ.50ರಷ್ಟು ಸಹಾಯಧನ ನೀಡುತ್ತದೆ. ಪ್ರಕರಣ ಪೂರ್ಣಗೊಂಡ ನಂತರ ಶೇ.25ರಂತೆ ಆರ್ಥಿಕ ನೆರವು ನೀಡುತ್ತದೆ. ಇಂತಹ ಪ್ರಕರಣಗಳಡಿ ಸರಕಾರ 1 ಲಕ್ಷದಿಂದ 8 ಲಕ್ಷ ಆರ್ಥಿಕ ನೆರವು ನೀಡುತ್ತದೆ ಎಂದ ಅವರು, ಯುಡಿಆರ್ ಆದ ಪ್ರಕರಣಗಳಿಗೆ ಆರ್ಥಿಕ ನೆರವು ಸಿಗುವುದಿಲ್ಲ ಎಂದರು.

ಸಂವಿಧಾನ ಸಂರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ದೌರ್ಜನ್ಯಗಳ ಬಗ್ಗೆ ದೂರು ನೀಡಲು ಹೋಗುವ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿಲ್ಲ. ಮೇಲ್ವರ್ಗದವರು, ಪ್ರಭಾವಿಗಳಿಂದಾಗಿ ಪೊಲೀಸ್ ಅಧಿಕಾರಿಗಳೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ದೂರು ದಾಖಲಿಸಲೂ ಹಿಂದುಮುಂದು ನೋಡುತ್ತಿದ್ದಾರೆ. ಪರಿಣಾಮ ಬಹುತೇಕ ಪ್ರಕರಣಗಳ ರಾಜಿಯಲ್ಲೇ ಸಮಾಪ್ತಿಯಾಗುತ್ತಿದ್ದು, ನ್ಯಾಯ ಮರಿಚೀಕೆಯಾಗಿದೆ. ಎಸ್ಸಿ, ಎಸ್ಟಿ ಸಮುದಾಯಗಳ ಜನರು ಕಾನೂನು ಅರಿವು ಹೊಂದಲು ಮುಂದೆ ಬರಬೇಕು. ತಮ್ಮ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆವುತಿ, ದಾನಿಹಳ್ಳಿ, ನರಿಗುಡ್ಡೆ ಗ್ರಾಮಗಳ ವ್ಯಾಪ್ತಿಯ ನೂರಾರು ಜನರು ಭೂ ವ್ಯಾಜ್ಯ, ದೌರ್ಜನ್ಯ ಪ್ರಕರಣಗಳ ಬಗ್ಗೆ ಕಾನೂನು ಸಲಹೆ, ಕಾನೂನು ಹೋರಾಟ ಮತ್ತಿತರ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆಯ ಗೌಸ್ ಮೊಹಿದ್ದೀನ್, ಹಸನಬ್ಬ, ನೀಲಗುಳಿ ಪದ್ಮನಾಭ, ರಘು, ಅಂಬೇಡ್ಕರ್ ಸೇನೆಯ ಸಂತೋಷ್, ಮಂಜುನಾಥ್ ಅರಿಶಿನಗುಪ್ಪೆ, ವಿಶ್ವರತ್ನ ಯುವಸೇನೆಯ ವೆಂಕಟೇಶ್, ವಕೀಲ ದೊಡ್ಡಯಯ್ಯ, ದಸಂಸ ಮುಖಂಡ ಗಣೇಶ್, ರಘು, ಶಿಕ್ಷಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಎಸ್ಸಿ ಎಸ್ಟಿ ಸಮುದಾಯದ ಜಮೀನುಗಳ ಪರಭಾರೆ ಸಂಬಂಧ 1979ರಲ್ಲಿ ಪಿಟಿಸಿಎಲ್ ಆಕ್ಟ್ ಜಾರಿಯಾಗಿದೆ. ಈ ಕಾಯ್ದೆಯಡಿಯಲ್ಲಿ ದಲಿತರಿಗೆ ಈ ಹಿಂದೆ ಮಂಜೂರಾದ ಯಾವುದೇ ಜಮೀನುಗಳು ಮೇಲ್ವರ್ಗದವರು, ಭೂ ಮಾಲಕರು ಸೇರಿದಂತೆ ಮತ್ತಿತರ ಕಾರಣದಿಂದ ಕಬಳಿಕೆ, ಒತ್ತುವರಿಯಾಗಿದ್ದಲ್ಲಿ ಅಂತಹ ಜಮೀನುಗಳನ್ನು ಹಿಂಪಡೆಯಲು ಅವಕಾಶ ಇತ್ತು. ಆದರೆ 2014ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರಕಾರ ನಿರ್ದಿಷ್ಟ ಕಾಲಮಿತಿಯೊಳಗೆ ಇಂತಹ ಪ್ರಕರಣವನ್ನು ಪೂರ್ಣಗೊಳಿಸಬೇಕೆಂದು ಕಾನೂನು ಮಾಡಿದೆ. ಪರಿಣಾಮ 2104ರ ಬಳಿಕ ನ್ಯಾಯಾಲಯಗಳಲ್ಲಿದ್ದ ಇಂತಹ ಲಕ್ಷಾಂತರ ಭೂ ವ್ಯಾಜ್ಯ ಪ್ರಕರಣಗಳಡಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಸಂತ್ರಸ್ತರಿಗೆ ನ್ಯಾಯ ಸಿಗದಂತಾಗಿದೆ. ಇದರ ವಿರುದ್ಧ ದಲಿತಪರ ಸಂಘಟನೆಗಳು ಧ್ವನಿ ಎತ್ತಬೇಕಿದೆ.

- ಶಿವಮಣಿ ತನ್, ಹೈಕೋಟ್ ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News