ಪ್ರತಿಯೊಬ್ಬರಿಗೂ ನಿವೇಶನ, ಸೂರು ಒದಗಿಸುವುದು ಸರಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-10-20 06:18 GMT

ಶಿವಮೊಗ್ಗ, ಅ‌.20: ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ನಿವೇಶನ ಒದಗಿಸುವುದು ಹಾಗೂ ಹಂತಹಂತವಾಗಿ ಮನೆಗಳನ್ನು ನಿರ್ಮಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಅವರು ಮಂಗಳವಾರ ಶಿಕಾರಿಪುರದಲ್ಲಿ ಆಯೋಜಿಸಲಾಗಿದ್ದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರತಿಯೆಬ್ಬರಿಗೂ ಮನೆ ಮನೆಗೆ ಹಕ್ಕುಪತ್ರ ತಲುಪಿಸಲಾಗುವುದು. ಮಧ್ಯವರ್ತಿಗಳಿಗೆ ಯಾರೂ ಹಣ ನೀಡಬಾರದು. ಯಾರಾದರೂ ದುಡ್ಡು ಕೇಳಿದರೆ ಜಿಲ್ಲಾದಧಿಕಾರಿಗೆ ದೂರು ನೀಡುವಂತೆ ಅವರು ತಿಳಿಸಿದರು.

ಈ ಬಾರಿ ಉತ್ತಮ ಮಳೆಯಾಗಿದ್ದು, ಕೃಷಿಯನ್ನು ಸುಸ್ತಿರಗೊಳಿಸುವುದು ಸರಕಾರದ ಗುರಿಯಾಗಿದೆ.  ತಾಲೂಕಿನಲ್ಲಿ ಮೆಕ್ಕೆ ಜೋಳ ಉತ್ತಮವಾಗಿ ಬಂದಿದ್ದು, ಕಾಳು ಬಿಡಿಸುವ ಯಂತ್ರವನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸಲಾಗುತ್ತಿದೆ. ಇದಕ್ಕಾಗಿ ಶಿಕಾರಿಪುರ ತಾಲೂಕಿಗೆ 1.40 ಕೋಟಿ ರೂ ನಿಗದಿಪಡಿಸಲಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿಕಾರಿಪುರ ತಾಲೂಕಿನ 14 ಗ್ರಾಮ ಪಂಚಾಯತ್ ವ್ಯಾಪ್ತಿಯ 403 ಫಲಾನುಭವಿಗಳಿಗೆ ಇಂದು ಹಕ್ಕುಪತ್ರ ವಿತರಿಸಲಾಗುತ್ತಿದೆ. ಮುಂದಿನ ಒಂದೆರಡು ವಾರಗಳ ಒಳಗಾಗಿ ಇನ್ನೂ 13 ಗ್ರಾಮ ಪಂಚಾಯತ್ ವ್ಯಾಪ್ತಿಯ 1 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಸೌಲಭ್ಯಗಳ ವಿತರಣೆ: ಮುಖ್ಯಮಂತ್ರಿ ಈ ಸಂದರ್ಭದಲ್ಲಿ ನಿವೇಶನರಹಿತರಿಗೆ ಹಕ್ಕುಪತ್ರ, ಕೃಷಿಕರಿಗೆ ಕೃಷಿ ಯಂತ್ರೋಪಕರಣ, ವಿದ್ಯಾರ್ಥಿಗಳಿಗೆ ಲಾಪ್ ಟಾಪ್, ಆಕಸ್ಮಿಕವಾಗಿ ಸಾವಿಗೀಡಾದ ರೈತರಿಗೆ ಪರಿಹಾರ ಧನ ವಿತರಿಸಿದರು.

ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News