ಹಿರಿಯ ಹೋರಾಟಗಾರ, ರೈತ ಮುಖಂಡ ಮಾರುತಿ ಮಾನ್ಪಡೆ ನಿಧನ

Update: 2020-10-20 10:57 GMT

ಕಲಬುರಗಿ, ಅ.20: ಕೊರೋನ ಸೋಂಕಿನಿಂದ ಬಳಲುತ್ತಿದ್ದ ಸಿಪಿಎಂ ಮುಖಂಡ ಹಾಗೂ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ (65) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.

ಎರಡು ವಾರಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಮಾರುತಿ ಮಾನ್ಪಡೆ, ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ನಂತರ ಅವರನ್ನು ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ವೆಂಟಿಲೇಟರ್ ನಲ್ಲಿದ್ದ ಅವರು, ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಹೋರಾಟಗಾರರನ್ನು ಅಗಲಿದ್ದಾರೆ.

ಹೋರಾಟದ ಬದುಕು: ಕಲಬುರಗಿ ಕಮಲಾಪುರದ ಲೆಂಗಟಿ ಗ್ರಾಮದಲ್ಲಿ ದಲಿತ ಸಮುದಾಯದಲ್ಲಿ ಹುಟ್ಟಿದ ಮಾರುತಿ ಮಾನ್ಪಡೆ, ತಮ್ಮ ಇಡೀ ಬದುಕನ್ನು ರೈತ, ಕಾರ್ಮಿಕ ಹಾಗೂ ಶೋಷಿತರಿಗಾಗಿ ಮೀಸಲಿಟ್ಟಿದ್ದರು. ಕಲಬುರಗಿಯಲ್ಲಿ ರೈತ ಹಾಗೂ ಕಾರ್ಮಿಕರಿಗಾಗುತ್ತಿದ್ದ ಶೋಷಣೆಯ ವಿರುದ್ಧ ಹೋರಾಟ ರೂಪಿಸುತ್ತಿದ್ದ ಅವರು, ಹಲವು ಸಲ ಪೊಲೀಸರಿಂದ ಲಾಠಿ ಏಟುಗಳನ್ನು ಎದುರಿಸಿದ್ದಾರೆಂದು ಸಿಪಿಎಂ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಸ್ಮರಿಸಿದ್ದಾರೆ.

ಕಳೆದ ವರ್ಷ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಮುಂಭಾಗವೇ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿತ್ತು. ಹೀಗೆ ಜನಪರ, ಜೀವಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ತಾವು ನಂಬಿದ್ದ ತತ್ವ, ಸಿದ್ಧಾಂತಕ್ಕೆ ಕಟಿಬದ್ಧರಾಗಿದ್ದರು ಎಂದು ಒಡನಾಡಿಗಳು ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯ ಕಂಬಾಲಪಲ್ಲಿ ದಲಿತರ ಸಜೀವ ದಹನ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಚಿಂತಾಮಣಿ ತಾಲೂಕಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲಾಗಿತ್ತು. ಸೌಹಾರ್ದ ಕರ್ನಾಟಕಕ್ಕಾಗಿ ನಡೆದ ಜಾಥಾಗಳು ಸೇರಿದಂತೆ ಹಲವಾರು ಹೋರಾಟಗಳನ್ನು ಇವರ ನೇತೃತ್ವದಲ್ಲಿ ನಡೆಸಲಾಗಿತ್ತು ಎಂದು ಸಿಪಿಎಂನ ಹಲವು ಕಾರ್ಯಕರ್ತರು ಸ್ಮರಿಸಿದ್ದಾರೆ. 

ಇತ್ತೀಚೆಗೆ ಕೇಂದ್ರ ಹಾರೂ ರಾಜ್ಯ ಸರಕಾರ ಜಾರಿ ಮಾಡಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತ ಹಾಗೂ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾರುತಿ ಮಾನ್ಪಡೆ ಭಾಗವಹಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿದ್ದರು. 

ಮಾರುತಿ ಮಾನ್ಪಡೆ ಜತೆಗೂಡಿ ಅನೇಕ ಹೋರಾಟಗಳನ್ನು ರೂಪಿಸಿದ್ದೇವೆ. ರೈತ, ಕಾರ್ಮಿಕಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಅವರು, ತಾವು ನಂಬಿದ್ದ ತತ್ವಕ್ಕೆ ನಿಷ್ಠರಾಗಿದ್ದರು. ಅವರ ನಿಧನದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. 
-ಎಸ್.ಕೆ.ಕಾಂತಾ, ಮಾಜಿ ಸಚಿವ

ಅಂಗನವಾಡಿ ಕಾರ್ಯಕತೆರ್ಯರು, ಆಶಾ ಕಾರ್ಯಕತೆಯರು, ಗ್ರಾಮ ಪಂಚಾಯತ್ ನೌಕರರು ಸೇರಿದಂತೆ ದುಡಿಯುವ ವರ್ಗದ ಅನೇಕ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುತ್ತಿದ್ದರು. ಹೀಗಾಗಿ ಅವರು ಶೋಷಿತರ ಪಾಲಿಗೆ ಆಶಾಕಿರಣವಾಗಿದ್ದರು.
-ಸುಭಾಷ್ ಆರ್.ಗುತ್ತೇದಾರ, ಆಳಂದ ಶಾಸಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News