20 ವಿದೇಶಿ ತಬ್ಲೀಗಿ ಜಮಾಅತ್ ಸದಸ್ಯರನ್ನು ದೋಷಮುಕ್ತಗೊಳಿಸಿದ ಮುಂಬೈ ನ್ಯಾಯಾಲಯ

Update: 2020-10-20 10:25 GMT

ಮುಂಬೈ: ರಾಜಧಾನಿ ದಿಲ್ಲಿಯ ನಿಝಾಮುದ್ದೀನ್‍ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಮುಚ್ಚಿಟ್ಟಿದ್ದಾರೆಂಬ ಕಾರಣಕ್ಕೆ ಪ್ರಕರಣ ಎದುರಿಸುತ್ತಿದ್ದ 10 ಮಂದಿ ಇಂಡೊನೇಷ್ಯದ ನಾಗರಿಕರು ಹಾಗೂ 10 ಮಂದಿ ಕಿರ್ಗಿಸ್ಥಾನ್ ನಾಗರಿಕರು ಸೇರಿದಂತೆ ಒಟ್ಟು 20 ವಿದೇಶೀಯರನ್ನು ಮುಂಬೈನ ಮ್ಯಾಜಿಸ್ಟೀರಿಯಲ್ ನ್ಯಾಯಾಲಯ ಸೋಮವಾರ ದೋಷಮುಕ್ತಗೊಳಿಸಿದೆ.

ಈ ವಿದೇಶೀಯರ ವಿರುದ್ಧ ಡಿ ಎನ್ ನಗರ್ ಪೊಲೀಸರು ಎಪ್ರಿಲ್ 5ರಂದು ಎರಡು ಪ್ರತ್ಯೇಖ ಪ್ರಕರಣಗಳನ್ನು ದಾಖಲಿಸಿದ್ದರು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತಬ್ಲೀಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿವರು ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಬೇಕು ಇಲ್ಲದೇ ಇದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮುಂಬೈ ಪೊಲೀಸರು ಇದಕ್ಕೂ ಮುನ್ನ ಎಚ್ಚರಿಕೆ ನೀಡಿದ್ದರೂ ಮೇಲೆ ತಿಳಿಸಿದ ಮಂದಿ  ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಅವರು ತಬ್ಲೀಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕುರಿತು ಎಪ್ರಿಲ್ ಮೊದಲ ವಾರದಲ್ಲಿ ತಿಳಿಯುತ್ತಲೇ ಪ್ರಕರಣ ದಾಖಲಿಸಲಾಗಿತ್ತು. ಎಲ್ಲರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ, ವಿದೇಶ ಕಾಯಿದೆ ಹಾಗೂ ಬಾಂಬೆ ಪೊಲೀಸ್ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿತ್ತು.

ಈ ತಬ್ಲೀಗಿಗಳ ವಿರುದ್ಧದ ಎಲ್ಲಾ ಇತರ ಆರೋಪಗಳನ್ನು ಕೈಬಿಟ್ಟಿದ್ದ ನ್ಯಾಯಾಲಯ ಕೇವಲ ಬಾಂಬೆ ಪೊಲೀಸ್ ಕಾಯಿದೆಯ ಸೆಕ್ಷನ್ 135 ಅನ್ವಯದ ಪ್ರಕರಣ ಮಾತ್ರ ವಿಚಾರಣೆ ಕೈಗೆತ್ತಿಕೊಂಡಿತ್ತು. ಲಾಕ್ ಡೌನ್ ನಿಯಮ ಹಾಗೂ ಪೊಲೀಸ್ ಆಯುಕ್ತರ ಆದೇಶ ಉಲ್ಲಂಘನೆಯ ಪ್ರಕರಣ ಇದಾಗಿತ್ತು. ದೂರುದಾರರಾಗಿರುವ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಹಾಗೂ ತನಿಖಾಧಿಕಾರಿಯನ್ನು ಮಾತ್ರ ಸಾಕ್ಷ್ಯಗಳಾಗಿ ವಿಚಾರಣೆಯನ್ನು ಪ್ರಾಸಿಕ್ಯೂಶನ್ ನಡೆಸಿತ್ತು. ಆದರೆ ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಶನ್ ಯಾವುದೇ ಬಲವಾದ ಪುರಾವೆ ಒದಗಿಸಿಲ್ಲ ಎಂದು ನ್ಯಾಯಾಲಯ ಹೇಳಿತಲ್ಲದೆ ದಾಖಲೆಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದ್ದರೂ ಪ್ರಾಸಿಕ್ಯೂಶನ್ ಸಾಕ್ಷಿಗಳ ವಿಚಾರಣೆ ವೇಳೆ ಆರೋಪಿಗಳು ಲಾಕ್ ಡೌನ್ ನಿಯಮಗಳು ಮತ್ತು ಆಯುಕ್ತರ ಆದೇಶವನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆಂದ ನ್ಯಾಯಾಲಯ ಎಲ್ಲಾ 20 ಮಂದಿಯನ್ನೂ ದೋಷಮುಕ್ತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News