ಗಾಝಿಯಾಬಾದ್‍ನ ಕರೇರ ಗ್ರಾಮದಲ್ಲಿ 236 ವಾಲ್ಮೀಕಿಗಳಿಂದ ಬೌದ್ಧ ಧರ್ಮ ಸ್ವೀಕಾರ

Update: 2020-10-20 11:07 GMT
Photo: theprint.in

ಗಾಝಿಯಾಬಾದ್ : ಇಲ್ಲಿನ ಕರೇರ ಗ್ರಾಮದಲ್ಲಿ ಅಕ್ಟೋಬರ್ 14ರಂದು ವಾಲ್ಮೀಕಿ ಸಮುದಾಯದ 236 ಮಂದಿ ಸದಸ್ಯರು ರಾಜರತ್ನ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಸರಿಯಾಗಿ 64 ವರ್ಷಗಳ ಹಿಂದೆ ಇದೇ ದಿನದಂದು ರಾಜರತ್ನ ಅವರ ಮುತ್ತಜ್ಜ  ಬಿ ಆರ್ ಅಂಬೇಡ್ಕರ್ ಅವರು ತಮ್ಮ 3.65 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ್ದರು ಎಂದು theprint.in ವರದಿ ಮಾಡಿದೆ.

ಕರೇರಾದಲ್ಲಿನ ವಾಲ್ಮೀಕಿ ಸಮುದಾಯದವರು ತಮಗೆ ಮೇಲ್ಜಾತಿಯ ಚೌಹಾಣರಿಂದ ದೌರ್ಜನ್ಯವಾಗುತ್ತಿದೆ ಎಂದು ಆರೋಪಿಸುತ್ತಾರೆ. ಕರೇರಾದಲ್ಲಿನ ಒಟ್ಟು 9000 ಜನಸಂಖ್ಯೆಯ ಪೈಕಿ 5,000 ಮಂದಿ ಚೌಹಾಣರಾಗಿದ್ದರೆ  2,000 ಮಂದಿ ವಾಲ್ಮೀಕಿ ದಲಿತ ಸಮುದಾಯದವರಾಗಿದ್ದಾರೆ. ಉಳಿದವರು ಹೊರಗಿನವರಾಗಿದ್ದು ಇಲ್ಲಿಯೇ ವಾಸಿಸುತ್ತಿದ್ದಾರೆ.

ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಈ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ನಿಭಾಯಿಸಿದ ರೀತಿ ಅಂತಿಮವಾಗಿ ತಮ್ಮ ಈ ತೀರ್ಮಾನಕ್ಕೆ ಕಾರಣ ಎಂದು ಮತಾಂತರಗೊಂಡ ವಾಲ್ಮೀಕಿಗಳು ಹೇಳಿಕೊಂಡಿದ್ದಾರೆ. ರಾತ್ರೋರಾತ್ರಿ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರು ನಡೆಸಿದ ರೀತಿಯಿಂದ ತಮಗೆ ಅಲ್ಲಿನ ಆದಿತ್ಯನಾಥ್ ಸರಕಾರದ  ಮೇಲಿನ ಎಲ್ಲಾ ವಿಶ್ವಾಸ ಕಳೆದು ಹೋಗಿದೆ ಎಂದು ಅವರು ಹೇಳುತ್ತಾರೆ.

"ಹಿಂದುಗಳು ನಮ್ಮನ್ನು ತಮ್ಮವರೆಂದು ಒಪ್ಪಿಕೊಳ್ಳುವುದಿಲ್ಲ, ಮುಸ್ಲಿಮರೂ ನಮ್ಮನ್ನು ಯಾವತ್ತೂ ಸ್ವೀಕರಿಸುವುದಿಲ್ಲ,'' ಎಂದು ಈ ಸಾಮೂಹಿಕ ಮತಾಂತರ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಕೆಲಸ ಮಾಡಿದ 27 ವರ್ಷದ ಪವನ್ ವಾಲ್ಮೀಕಿ ಹೇಳುತ್ತಾನೆ. "ಹತ್ರಸ್ ಘಟನೆಯ ನಂತರ ಸರಕಾರವೂ ನಮ್ಮನ್ನು ಸ್ವೀಕರಿಸುವುದಿಲ್ಲ, ನಮ್ಮ ಮುಂದೆ ಇನ್ನು ಯಾವ ಆಯ್ಕೆ ಉಳಿದಿದೆ?,'' ಎಂದು ಆತ ಪ್ರಶ್ನಿಸುತ್ತಾನೆ.

ಕರೇರಾ ಗಾಝಿಯಾಬಾದ್‍ನ ಒಂದು ಪುಟ್ಟ ಹಳ್ಳಿಯಾಗಿದ್ದು  ಭಾರತೀಯ ವಾಯು ಪಡೆಯ ಹಿಂಡೊನ್ ವಾಯು ನೆಲೆ ಸಮೀಪದಲ್ಲಿದೆ. ಇಲ್ಲಿ ಮೇಲ್ಜಾತಿಯ ಜನರು ವಾಸಿಸುವ ಮನೆಗಳು ಹಾಗೂ  ದಲಿತರು ವಾಸಿಸುವ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಮೇಲ್ಜಾತಿಯವರ ಮನೆಗಳು ದೊಡ್ಡದಾಗಿದೆ ಹಾಗೂ ಅಲ್ಲಿನ ಪರಿಸರವೂ ಸ್ವಚ್ಛವಾಗಿದೆಯಲ್ಲದೆ ಅಲ್ಲೊಂದು ಹೊಳೆಯುವ ದೇವಳವೂ ಇದೆ. ಆದರೆ ವಾಲ್ಮೀಕಿಗಳ ಪ್ರದೇಶಗಳಲ್ಲಿ ಚಿಕ್ಕ ಎರಡು ಕೊಠಡಿ ಮನೆಗಳು, ತೆರೆದ ಚರಂಡಿಗಳು ಹಾಗೂ ಒಂದು ದೇವಸ್ಥಾನವಿದೆ. ಚೌಹಾಣರು ಕೆಳಜಾತಿಯವರೆಂದು ತಿಳಿಯಲಾದ ವಾಲ್ಮೀಕಿಗಳು ವಾಸಿಸುವ  ಪ್ರದೇಶಗಳಿಗೆ ಭೇಟಿ ನೀಡುವುದಿಲ್ಲ ಹಾಗೂ ಚೌಹಾಣರು ವಾಸಿಸುವ ಪ್ರದೇಶದಲ್ಲಿರುವ ದೇವಸ್ಥಾನಕ್ಕೆ ವಾಲ್ಮೀಕಿಗಳಿಗೆ ಪ್ರವೇಶವಿಲ್ಲ ಎಂದು theprint.in ವರದಿ ಮಾಡಿದೆ.

ಆದರೆ ಗ್ರಾಮದಲ್ಲಿ ಯಾವುದೇ ಜಾತಿ ಆಧರಿತ ವಿಂಗಡಣೆಯಿಲ್ಲ ಎಂದು ಚೌಹಾಣ್ ಸಮುದಾಯದ ಮಂದಿ ಹೇಳುತ್ತಾರೆ.  ಆದರೆ ಅಂತಹ ತಾರತಮ್ಯವೇನೂ ಇಲ್ಲ ಎಂದು ಆರಂಭದಲ್ಲಿ ಹೇಳುವ ಅಲ್ಲಿನ ಬ್ಯೂಟಿ ಪಾರ್ಲರ್ ಒಂದರ ಮಾಲಕಿ, ವಾಲ್ಮೀಕಿ ಸಮುದಾಯದ ಮಹಿಳೆಯರು ತನ್ನ ಬ್ಯೂಟಿ ಪಾರ್ಲರ್‍ಗೆ ಬರುತ್ತಾರೆ, ಎಲ್ಲ ಗ್ರಾಹಕರಂತೆಯೇ ಅವರನ್ನೂ ಕಾಣಲಾಗುತ್ತದೆ ಎನ್ನುತ್ತಾರಾದರೂ ಚೌಹಾಣರು ಮಾತ್ರ ವಾಲ್ಮೀಕಿಗಳ ಪ್ರದೇಶಕ್ಕೆ ಹೋಗುವುದಿಲ್ಲ ಎಂಬುದನ್ನೂ ಸೂಚ್ಯವಾಗಿ ತಿಳಿಸುತ್ತಾರೆ.

ಆದರೆ ಈ ಗ್ರಾಮದಲ್ಲಿ ನಡೆದ ಮತಾಂತರದ ಕುರಿತಂತೆ ನಗರ ನಿಗಮ ಕೌನ್ಸಿಲರ್ ವಿಜೇಂದರ್ ಸಿಂಗ್ ಚೌಹಾಣ್ ಅವರನ್ನು ಪ್ರಶ್ನಿಸಿದಾಗ, ದಲಿತರ ಮತಗಳನ್ನು ಗಿಟ್ಟಿಸಲು ಕಾಂಗ್ರೆಸ್ ತಂತ್ರಗಾರಿಕೆ ಎಂದು ಹೇಳುತ್ತಾರೆ. ಆದರೆ ಚೌಹಾಣರ ದೇವಸ್ಥಾನಕ್ಕೆ ವಾಲ್ಮೀಕಿಗಳಿಗೆ ಏಕೆ ಪ್ರವೇಶವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ನೋಡಿ, ಒಬ್ಬ ವ್ಯಕ್ತಿ ಚಿಂದಿ ಆಯುವವನಾಗಿದ್ದರೆ ನಾವು ಆತನ ಜತೆ ಮಾತನಾಡುವುದಿಲ್ಲ ಅಲ್ಲವೇ? ಅದೇ ರೀತಿ ಈ  ದೇವಸ್ಥಾನಗಳನ್ನು ಅದೇ ಸಮುದಾಯದ ಮಂದಿ ನಿರ್ಮಿಸಿ ಅವರದ್ದೇ ಪದ್ಧತಿ ಅನುಸರಿಸುತ್ತಿದಾರೆ. ಚೌಹಾಣರು ವಾಲ್ಮೀಕಿಗಳಂತೆ ಮಾಂಸ ಸೇವಿಸುವುದಿಲ್ಲ, ಎಲ್ಲರಿಗೂ ಅವರದೇ ಆದ ದೇವಸ್ಥಾನವಿರುವುದರಿಂದ ಇತರ ಸಮುದಾಯದ ದೇವಸ್ಥಾನಕ್ಕೆ ಹೋಗುವುದಿಲ್ಲ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News