ರಾಜ್ಯದ ಪ್ರವಾಹ ಸಮಸ್ಯೆ ನಿವಾರಣೆಗೆ ಎಸ್‍ಡಿಆರ್‍ಎಫ್ ನಿಧಿ ಬಳಸಲಿ: ಶಾಸಕ ದಿನೇಶ್ ಗುಂಡೂರಾವ್

Update: 2020-10-20 11:07 GMT

ಬೆಂಗಳೂರು, ಅ.20: ರಾಜ್ಯದ ಪ್ರವಾಹ ಸಮಸ್ಯೆ ನಿವಾರಣೆಗೆ ರಾಜ್ಯ ಸರಕಾರ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ(ಎಸ್‍ಡಿಆರ್‍ಎಫ್) ಬಳಸಬೇಕು ಎಂದು ಶಾಸಕ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಪ್ರವಾಹಕ್ಕೆ ಒಟ್ಟು 15 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಆಗಸ್ಟ್ ವರೆಗಿನ ನಷ್ಟಕ್ಕೆ ಕೇಂದ್ರ ಇನ್ನು ಪರಿಹಾರವೇ ಕೊಟ್ಟಿಲ್ಲ. ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರಕ್ಕೆ ಈಗ ಎಸ್‍ಡಿಆರ್‍ಎಫ್ ನಿಧಿಯೇ ಅನಿವಾರ್ಯ. ಹಾಗಾಗಿ ಎಸ್‍ಡಿಆರ್‍ಎಫ್‍ನಲ್ಲಿ ಇನ್ನೂ ಹಣ ಎಷ್ಟಿದೆ ಎಂಬುದನ್ನು ಸರಕಾರ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.

ಕೊರೋನ ನಿರ್ವಹಣೆಗೂ ಕೆಂದ್ರದಿಂದ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಸಿಕ್ಕಿಲ್ಲ. ನಿಯಮಗಳ ಅನ್ವಯ ಕೊರೋನ ವಿಕೋಪಕ್ಕೂ ಎಸ್‍ಡಿಆರ್‍ಎಫ್ ನಿಧಿಯನ್ನೇ ಬಳಸಬೇಕು. ರಾಜ್ಯ ಈಗಾಗಲೇ ಕೊರೋನ ನಿರ್ವಹಣೆಗೆ ಎಸ್‍ಡಿಆರ್‍ಎಫ್ ನಿಧಿ ಖರ್ಚು ಮಾಡಿದೆ. ಹೀಗಿರುವಾಗ ಪ್ರಕೃತಿ ವಿಕೋಪಕ್ಕೆ ತೆಗೆದಿಟ್ಟಿರುವ ಮೊತ್ತವೆಷ್ಟು? ಎಸ್‍ಡಿಆರ್‍ಎಫ್‍ನಡಿ ಬರಬೇಕಾದ ಪರಿಹಾರವೆಷ್ಟು ಎಂಬ ಮಾಹಿತಿ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಎಚ್‍ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕೇತಗಾನಹಳ್ಳಿ ತೋಟದ ಮನೆಯಲ್ಲಿ ತಾವು ನಡೆಸಿದ ಅಕ್ರಮದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ, ಪುಟ್ಟಣ್ಣ ಅವರ ಶಿಫಾರಸ್ಸಿನಂತೆ ಕೆಪಿಎಸ್‍ಸಿ ಮೇಲೆ ಪ್ರಭಾವ ಬೀರಿ 12 ಜನರಿಗೆ ಉಪನ್ಯಾಸಕ ಹುದ್ದೆ ಕೊಡಿಸಿದ್ದಾರೆ. ಪಾರದರ್ಶಕವಾಗಿರಬೇಕಾದ ನೇಮಕಾತಿಯಲ್ಲಿ ಅನರ್ಹರಿಗೆ ಉದ್ಯೋಗ ಕೊಡಿಸಿದ್ದು ಹಗರಣವಲ್ಲವೆ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News