ಸರಕಾರದ ನೀತಿಯಿಂದಾಗಿ ಹೋರಾಟಗಾರನ ಸಾವು: ಮಾರುತಿ ಮಾನ್ಪಡೆ ನಿಧನದ ಬಗ್ಗೆ ಸಿದ್ದರಾಮಯ್ಯ

Update: 2020-10-20 13:30 GMT

ಬೆಂಗಳೂರು, ಅ.20: ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದರು. ಇಂತಹ ಜನವಿರೋಧಿ ಕಾನೂನುಗಳ ವಿರುದ್ಧ ಹೋರಾಟ ಮಾಡುತ್ತಲೇ ಮಾರುತಿ ಮಾನ್ಪಡೆ ಕೋವಿಡ್ ಸೋಂಕಿಗೆ ತುತ್ತಾಗಿ ಹುತಾತ್ಮರಾಗಿದ್ದಾರೆ. ಹೀಗಾಗಿ ಅವರ ಬಲಿದಾನವನ್ನು ವ್ಯರ್ಥವಾಗಲು ಬಿಡಬಾರದೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ರೈತ ನಾಯಕ ಮಾರುತಿ ಮಾನ್ಪಡೆ ನಿಧನಕ್ಕೆ ಸಂತಾಪ ಸೂಚಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ-ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರದೇ ಹೋಗಿದ್ದರೆ ಹೋರಾಟಗಾರ ಮಾರುತಿ ಮಾನ್ಪಡೆ ಬದುಕುಳಿಯುತ್ತಿದ್ದರು. ಸರಕಾರವೇ ಒಂದರ್ಥದಲ್ಲಿ ಒಬ್ಬ ಹೋರಾಟಗಾರನನ್ನು ಕೊಂದಂತಾಗಿದೆ ಎಂದು ಕಿಡಿಕಾರಿದ್ದಾರೆ.

ರೈತ, ಕಾರ್ಮಿಕ ಹೋರಾಟಗಳು ಐಕ್ಯತಾ ವೇದಿಕೆಯಲ್ಲಿ ನಡೆಯಬೇಕೆಂದು ಸದಾ ಹಂಬಲಿಸುತ್ತಿದ್ದ ಮಾರುತಿ ಮಾನ್ಪಡೆ, ಈ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸುವ ಹಠ ತೊಟ್ಟಿದ್ದರು. ಇಡೀ ದೇಶ ಮತ್ತು ಸಮಾಜ ಕೊರೋನದ ಆತಂಕದಲ್ಲಿ ಮುದುಡಿ ಹೋಗಿರುವ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದಾರೆ. ಇವುಗಳ ವಿರುದ್ಧ ಐಕ್ಯ ಹೋರಾಟ ರೂಪಿಸಬೇಕೆಂದು ಮಾರುತಿ ಪದೇ ಪದೇ ಹೇಳುತ್ತಿದ್ದರೆಂದು ಅವರು ಸ್ಮರಿಸಿದ್ದಾರೆ.

ಹೋರಾಟಗಾರ ಮಾರುತಿ ಮಾನ್ಪಡೆ ಅಗಲಿಕೆ ಜನಪರ ಚಳವಳಿಗೆ ತುಂಬಲಾರದ ನಷ್ಟ. ಸರಕಾರಗಳನ್ನು ಪ್ರಶ್ನಿಸುವುದರಿಂದ, ಪ್ರತಿಭಟಿಸುವುದರಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳುತ್ತದೆ ಎಂಬುದನ್ನು ಮಾನ್ಪಡೆ ನಂಬಿದ್ದರು. ಹಾಗೂ ಅದನ್ನೇ ತನ್ನ ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದಿದ್ದರು. ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನ ಸಮುದಾಯದ ಪರವಾಗಿ ಸರಣಿ ಪ್ರತಿಭಟನೆಗಳನ್ನು ಸಂಘಟಿಸಿ ಬೀದಿಗಿಳಿದು, ಹೋರಾಟ ಮಾಡುತ್ತಲೇ ಕೋವಿಡ್ ಸೋಂಕಿಗೆ ಸಿಲುಕಿ ಮೃತಪಟ್ಟಿದ್ದಾರೆಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.

ರೈತ, ಕಾರ್ಮಿಕ ಹಾಗೂ ದಲಿತ ಸಂಘಟನೆಗಳ ಅನೇಕ ಮುಖಂಡರು, ಕಾರ್ಯಕರ್ತರಿಗೆ ಕೊರೋನ ಬಾಧಿಸಿದೆ. ಇನ್ನು ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News