ಮೈತ್ರಿ ಸರಕಾರ ಪತನಕ್ಕೆ ‘ಮೀರ್ ಸಾದಿಕ್’ ಡಿಕೆಶಿ ಕಾರಣ: ಡಿಸಿಎಂ ಅಶ್ವತ್ಥ ನಾರಾಯಣ

Update: 2020-10-20 14:01 GMT

ಬೆಂಗಳೂರು, ಅ.20: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಮೀರ್ ಸಾದಿಕ್‍ ಡಿ.ಕೆ.ಶಿವಕುಮಾರ್ ಕಾರಣ. ಕುಮಾರಸ್ವಾಮಿಯ ಜೊತೆಯಲ್ಲೆ ಇದ್ದು ಅವರಿಗೆ ಮೋಸ ಮಾಡಿದ್ದಾರೆ. ಈ ಸಂಬಂಧ ನಮ್ಮ ಬಳಿ ಆಡಿಯೋ ದಾಖಲೆ ಇದ್ದು, ಶೀಘ್ರದಲ್ಲೆ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಮಂಗಳವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2008ರಲ್ಲಿ ಕುಮಾರಸ್ವಾಮಿ ಬಿಜೆಪಿ ಅಧಿಕಾರ ಹಸ್ತಾಂತರ ಮಾಡದೆ ಅನ್ಯಾಯ ಮಾಡಿದ್ದರು. ಈಗ ಡಿಕೆಶಿ ಮತ್ತು ಸಿದ್ದರಾಮಯ್ಯ ಮೈತ್ರಿ ಸರಕಾರಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಒಂದು ರೂಪಾಯಿಯನ್ನು ಪಡೆದಿಲ್ಲ. ಮುನಿರತ್ನ ಹಣಕ್ಕಾಗಿ ತಮ್ಮನ್ನು ಮಾರಿಕೊಂಡಿದ್ದಾರೆಂದು ಆರೋಪಿಸುವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್‍ಗೆ ಈ ಹಿಂದೆ ಮುನಿರತ್ನ ಆಪ್ತರಾಗಿದ್ದರು. ಇವತ್ತು ಅವರು ಪಕ್ಷ ಬಿಡಲು ಏನು ಕಾರಣ? ಯಾರು ಅವರನ್ನು ಕಳಿಸಿಕೊಟ್ಟಿದ್ದು? ಎಂಬುದನ್ನು ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದರು.

ನಾಯಕತ್ವ ಬದಲಾವಣೆಯಿಲ್ಲ: ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೆ ಮುಂದುವರಿಯುತ್ತಾರೆ. ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪಕ್ಷ ನಿರ್ಧರಿಸುತ್ತದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News