ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸಲು ಬಿಜೆಪಿಯಲ್ಲಿ ದೊಡ್ಡಮಟ್ಟದ ಚರ್ಚೆ: ಸಿದ್ದರಾಮಯ್ಯ

Update: 2020-10-20 14:05 GMT

ಬಾದಾಮಿ, ಅ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಬೀಳಿಸುವ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ. ಒಂದು ವೇಳೆ ಅವರ ಆಂತರಿಕ ತಿಕ್ಕಾಟದಿಂದ ಸರಕಾರ ಪತನವಾದರೆ, ನಾವು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಮಂಗಳವಾರ ಬಾದಾಮಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಯಡಿಯೂರಪ್ಪ ಹೆಚ್ಚು ದಿನಗಳ ಕಾಲ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂಬ ಮಾತುಗಳನ್ನು ಅವರ ಪಕ್ಷದವರೇ ಹೇಳುತ್ತಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ದೊಡ್ಡಮಟ್ಟದ ಚರ್ಚೆಯಂತೂ ಬಿಜೆಪಿಯಲ್ಲಿ ನಡೆಯುತ್ತಿದೆ. ಯಡಿಯೂರಪ್ಪ ಪದಚ್ಯುತಿ ಬಳಿಕ ಯಾರು ಮುಖ್ಯಮಂತ್ರಿ ಆಗುತ್ತಾರೆ ಅನ್ನೋದು ಅವರ ಪಕ್ಷದ ಆಂತರಿಕ ವಿಚಾರ ಎಂದು ಅವರು ಹೇಳಿದರು.

ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನವನ್ನು ಕಡಿತ ಮಾಡಲಾಗಿದೆ ಎಂದು ನಾವು ಹೇಳುತ್ತಿದ್ದೆವು. ಆದರೆ, ಇದೀಗ ಅವರ ಪಕ್ಷದ ಶಾಸಕರಿಗೂ ಬಿಸಿ ಮುಟ್ಟಿದೆ. ಆದುದರಿಂದ, ಈಗ ಅವರು ಜನತೆಯ ಮುಂದೆ ಸತ್ಯ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಎಚ್‍ಡಿಕೆ ವಿರುದ್ಧ ಕಿಡಿ: ಮೈತ್ರಿ ಸರಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣವೆಂದು ಟೀಕಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಗಾರಿದ ಅವರು, ‘ಕುಣಿಯಲಾರದವರು ನೆಲ ಡೊಂಕು ಅಂತಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿಕ್ಕೆ ಆಗದೇ ಇರೋರು ಈ ತರ ಹೇಳುತ್ತಾ ತಿರುಗುತ್ತಾರೆ’. ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News