ಖಾಲಿ ಇಲ್ಲದ ಸೀಟ್ ಮೇಲೆ ಟವಲ್ ಹಾಕಿ ಸಮಯ ವ್ಯರ್ಥ ಮಾಡಬೇಡಿ: ಯತ್ನಾಳ್ ಗೆ ಆರ್.ಅಶೋಕ್ ತಿರುಗೇಟು

Update: 2020-10-20 15:02 GMT

ಬೆಂಗಳೂರು, ಅ.20: ರಾಜ್ಯದಲ್ಲಿ ಸದ್ಯಕ್ಕೆ ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಖಾಲಿ ಇಲ್ಲದ ಸೀಟ್ ಮೇಲೆ ಟವಲ್ ಹಾಕಿ ಸಮಯ ವ್ಯರ್ಥ ಮಾಡೋದು ಎಷ್ಟರಮಟ್ಟಿಗೆ ಸರಿ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಅವರ ನೇತೃತ್ವದಲ್ಲೇ ಈ ಸರಕಾರ ಮುಂದುವರಿಯಲಿದೆ. ಆದುದರಿಂದ, ಯತ್ನಾಳ್ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಲಿ ಎಂದರು.

ಶಿರಾ ಹಾಗೂ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪವನ್ನು ಅಲ್ಲಗೆಳೆದ ಅಶೋಕ್, ರಾಜ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಆ ಪಕ್ಷವನ್ನು ಮುಗಿಸಲು ಮುಂದಾಗಿದ್ದೇ ಡಿ.ಕೆ.ಶಿವಕುಮಾರ್. ಜೆಡಿಎಸ್ ಜೊತೆ ನಾವು ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು.

ವಿಜಯಪುರದಲ್ಲಿ ರವಿವಾರ ರಾತ್ರಿ ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೈಕಮಾಂಡ್‍ಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಇನ್ನು ಹೆಚ್ಚು ದಿನ ಅವರ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕದವರೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News