ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಲು ಶಾಲೆ ತೆರೆಯುವುದು ಅಗತ್ಯ

Update: 2020-10-20 15:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.20: ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಮಾಡಬೇಕಾದರೆ ವಾರದಲ್ಲಿ ಎರಡು ದಿನಗಳ ಮಟ್ಟಿಗಾದರು ಶಾಲೆಗಳನ್ನು ತೆರೆಯುವುದು ಅಗತ್ಯವೆಂದು ಮಗು ಮತ್ತು ಕಾನೂನು ಕೇಂದ್ರದ ಹಿರಿಯ ಸದಸ್ಯ ನಿರಂಜನಾರಾಧ್ಯ ಸೇರಿದಂತೆ ಹಲವು ಮಂದಿ ಶಿಕ್ಷಣ ತಜ್ಞರು, ವೈದ್ಯಕೀಯ ತಜ್ಞರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತಜ್ಞರು, ಶಾಲೆಯಲ್ಲಿ ಕಲಿಕೆಯ ಹೊರತಾಗಿಯೂ ಪೌಷ್ಟಿಕತೆ ಮತ್ತು ಆರೋಗ್ಯ ಸೇರಿದಂತೆ ಶಿಕ್ಷಣದ ಇತರೆ ಹಲವು ಪೂರಕ ಮತ್ತು ಬೆಂಬಲಿತ ಅಂಶಗಳಿಗೆ ಶಾಲೆ ಒಂದು ಪ್ರಮುಖ ತಾಣವಾಗಿದೆ. ಹೀಗಾಗಿ ಶಾಲೆಗಳು ಮುಚ್ಚಿರುವುದರಿಂದ ಪೌಷ್ಟಿಕಾಂಶಯುಕ್ತ ಬಿಸಿ ಹಾಲು, ಮಧ್ಯಾಹ್ನದ ಬಿಸಿಯೂಟ ಹಾಗೂ ರೋಗ ನಿರೋಧಕ ಮಿಟಮಿನ್ ಮಾತ್ರೆಗಳಿಂದ ಮಕ್ಕಳು ವಂಚಿತರಾಗಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶವು ಈಗಾಗಲೇ ಹೆಚ್ಚಿನ ಅಪೌಷ್ಟಿಕತೆಯ ಸ್ಥಿತಿಯನ್ನು ಹೊಂದಿದೆ. ಇದರಿಂದ ಮಕ್ಕಳ ಬೆಳವಣಿಗೆಯಲ್ಲಿ ತೀವ್ರ ಕುಂಠಿತವಾಗಿದ್ದು, ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ಮಧ್ಯಾಹ್ನದ ಬಿಸಿ ಊಟವನ್ನು ನಿರಂತರವಾಗಿ ಕಳೆದುಕೊಳ್ಳುವುದರಿಂದ ಈ ಹಾನಿ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಆಗೊಮ್ಮೆ, ಈಗೊಮ್ಮೆ ಪಡಿತರ ದಿನಸಿಯನ್ನು ಕುಟುಂಬಕ್ಕೆ ಒದಗಿಸುವುದರಿಂದ ಈ ಹಾನಿಯನ್ನು ತಗ್ಗಿಸಲಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಶಾಲೆಯು ಮಗುವಿನ ಸಂರಕ್ಷಣೆ ಮತ್ತು ಭದ್ರತೆಯಿರುವ ಒಂದು ಮುಖ್ಯ ಸ್ಥಳವಾಗಿದೆ. ಲಭ್ಯವಿರುವ ಸಂಶೋಧನೆ ಹಾಗೂ ಅಂಕಿ ಅಂಶಗಳ ಪ್ರಕಾರ, ಲಾಕ್‍ಡೌನ್ ಸಮಯದಲ್ಲಿ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ. ಬಾಲ್ಯ ವಿವಾಹ ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಹೊಂದುವುದು ಅವರ ಆರೋಗ್ಯದ ಜತೆಗೆ ಮಕ್ಕಳ ಆರೋಗ್ಯದ ಮೇಲೆ ಮತ್ತಷ್ಟು ಹಾನಿ ಮಾಡುತ್ತದೆ. ಹೀಗಾಗಿ ಶಾಲೆಯ ಅನುಪಸ್ಥಿತಿಯಲ್ಲಿ ಹೆಚ್ಚಿನ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಮತ್ತು ಅಪೌಷ್ಟಿಕತೆ ಹೆಚ್ಚಾಗಿದೆ. ಇವೆಲ್ಲ ಸಮಸ್ಯೆಗಳ ನಿವಾರಣೆಗೆ ಸೀಮಿತ ಅವಧಿಯಾದರು ಶಾಲೆಗಳನ್ನು ತೆರೆಯುವುದು ಅಗತ್ಯವಿದೆ ಎಂದು ತಜ್ಞರು ಒತ್ತಾಯಿಸಿದ್ದಾರೆ.

ಈ ಮೇಲಿನ ಅಭಿಪ್ರಾಯವನ್ನು ಬಾಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಶಂಕರ್ ಹಲಗಟ್ಟಿ, ಅಝೀಂ ಪ್ರೇಮ್‍ಜಿ ವಿವಿಯ ರಿಷಿಕೇಶ್ ಹಾಗೂ ಅಮ್ಮನ್ ಮದನ್, ಕರ್ನಾಟಕ ವಿಚಾರ ವೇದಿಕೆಯ ನಾಗೇಶ್ ಅರಲಕುಪ್ಪೆ, ಪಿಯುಸಿಎಲ್‍ನ ವೈ.ಜೆ.ರಾಜೇಂದ್ರ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಶ್ರೀಪಾದ್ ಭಟ್, ವೈದ್ಯಕೀಯ ತಜ್ಞ ಡಾ.ಶ್ರೀನಿವಾಸ ಕಕ್ಕಿಲಾಯ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಅಧ್ಯಕ್ಷ ಮೊಯ್ಯುದ್ದೀನ್ ಕುಟ್ಟಿ ಸೇರಿದಂತೆ ಹಲವು ತಜ್ಞರು ಅನುಮೋದಿಸಿದ್ದಾರೆ.

ತಜ್ಞರ ಸಲಹೆ

- ವಾರಕ್ಕೆ ಎರಡು ದಿನ ಮಟ್ಟಿಗಾದರೂ ವಿವಿಧ ದಿನಗಳಲ್ಲಿ ವಿವಿಧ ತರಗತಿಗಳನ್ನು, ವಿಭಾಗಗಳನ್ನು ತೆರೆಯಬಹುದು.

- ವಿದ್ಯಾರ್ಥಿಗಳ ನಡುವೆ ಸುರಕ್ಷಿತ ಅಂತರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಕಟ್ಟುನಿಟ್ಟಾಗಿ ಸ್ಯಾನಿಟೈಸರ್, ಥರ್ಮಲ್ ಸೆನ್ಸರ್ ಗಳನ್ನು ಹಾಗೂ ಮಾಸ್ಕ್ ಗಳನ್ನು ರಾಜ್ಯ ಸರಕಾರ ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕು.

- ಹಂತ, ಹಂತವಾಗಿ ಶಾಲೆಗಳ ಪ್ರಾರಂಭ ಹಾಗೂ ವಿಕೇಂದ್ರಿಕೃತ ರೀತಿಯಲ್ಲಿ ವಿದ್ಯಾಗಮವನ್ನು ಪುನರಾರಂಭಿಸಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News