ಯೋಗ, ಯೋಗ್ಯತೆ ಇರುವ ಯಾರು ಬೇಕಾದರೂ ಸಿಎಂ ಆಗಬಹುದು: ಸಚಿವ ಸಿ.ಟಿ ರವಿ

Update: 2020-10-21 11:35 GMT

ಕೊಪ್ಪಳ, ಅ.21: ಸಮಗ್ರ ಕರ್ನಾಟಕಕ್ಕೆ ಯೋಗ ಮತ್ತು ಯೋಗ್ಯತೆ ಇರುವ ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಕೊಪ್ಪಳದ ಗವಿಮಠಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹತಾಶೆಯ ಸ್ಥಿತಿಯಿಂದ ವಿಶ್ವಾಸದ ಸ್ಥಿತಿಗೆ ಬರುವಂತೆ ಮಾಡಿದ್ದು ಕರ್ನಾಟಕದ ಏಕೀಕರಣ. ಶಾಸಕ ಬಸನಗೌಡ ಪಾಟೀಲ್ ಯತ್ನಾಳರಷ್ಟು ಬುದ್ಧಿವಂತ ನಾನಲ್ಲ. ಆದರೆ, ಸಮಗ್ರ ಕರ್ನಾಟಕಕ್ಕೆ ನಾಯಕತ್ವ ನೀಡುವ ಸಾಮರ್ಥ್ಯ ಉತ್ತರ ಕರ್ನಾಟಕಕ್ಕಿದೆ ಎಂದಿದ್ದಾರೆ.

ಈ ಹಿಂದೆ ವೀರೇಂದ್ರ ಪಾಟೀಲರು ಸಮಗ್ರ ಕರ್ನಾಟಕಕ್ಕೆ ನಾಯಕತ್ವ ನೀಡಿದ್ದರು. ಹೀಗಾಗಿ ಇಡೀ ರಾಜ್ಯಕ್ಕೆ ಯೋಗ ಮತ್ತು ಯೋಗ್ಯತೆ ಇರುವ ಯಾರು ಬೇಕಾದರೂ ಸಿಎಂ ಆಗಬಹುದು ಎಂದರು.

ಉಪಚುನಾವಣೆಯಲ್ಲಿ ಮತದಾರರ ಮನೋಭಾವ ಬಿಜೆಪಿ ಪರವಾಗಿದೆ. ಹೀಗಾಗಿ, ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್‍ನ ನಾಲ್ಕು ಹಾಗೂ ವಿಧಾನಸಭೆಯ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರದಿಂದ ತತ್ತರಿಸಿ ಮಳೆಗಾಗಿ ಕಾಯುತ್ತಿದ್ದ ಜನರಿಗೆ ಈಗ ಭರಪೂರ ಮಳೆಯಾಗಿ ನೆರೆ ಬಂದಿದೆ. ಇದು ಅನಿರೀಕ್ಷಿತ. ಇಂತಹ ಸಂದರ್ಭದಲ್ಲಿ ನಿರೀಕ್ಷೆಗಳು ಸಹಜ. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ನೆರೆ ಪೀಡಿತ ಜನರ ಸಂಕಷ್ಟಕ್ಕೆ ಸರಕಾರ ಸ್ಪಂದಿಸುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಕೋವಿಡ್ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಉಂಟಾಗಿರುವ ನೆರೆ ಹಿನ್ನೆಲೆಯಲ್ಲಿ ಸಿಎಂ ಸಹ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಇಂದು ಪರಿಶೀಲನೆಗೆ ತೆರಳುತ್ತಿದ್ದಾರೆ. ಕೆಲ ಸಚಿವರು, ಅವರ ಕುಟುಂಬದವರಿಗೆ ಕೊರೋನ ಬಾಧಿಸಿದೆ. ಇಂತಹ ಸಂದರ್ಭದಲ್ಲಿ ಯೋಚನೆ ಮಾಡಿ ಮಾತನಾಡಬೇಕು. ಕಾಂಗ್ರೆಸ್‍ನದ್ದು ಗ್ರಾಮಾಫೋನ್ ಕ್ಯಾಸೆಟ್. ನೆರೆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಎಷ್ಟು ಸಹಾಯ ನೀಡಿದೆ. ಬಿಜೆಪಿ ಸರಕಾರ ಎಷ್ಟು ಪರಿಹಾರ ನೀಡಿದೆ ಎಂದು ಎಲ್ಲರಿಗೂ ಗೊತ್ತು ಎಂದು ಹೇಳಿದರು.

ಯುಪಿಎ ಸರಕಾರ ಹೆಕ್ಟೇರ್‍ ಗೆ 2,800 ರೂ. ನೀಡಿದೆ. ಆದರೆ ಬಿಜೆಪಿ ಸರಕಾರ ಹೆಕ್ಟೇರ್ ಗೆ 13 ಸಾವಿರ ರೂ. ಪರಿಹಾರ ನೀಡಿದೆ. ಎನ್‍ಡಿಆರ್‍ಎಫ್ ಅನುದಾನದಲ್ಲಿ ರಾಜ್ಯಕ್ಕೆ ಒಂದು ರೂ. ಸಹ ಕಡಿಮೆಯಾಗುವುದಿಲ್ಲ. ಈ ಹಿಂದೆ ನೆರೆ ಬಂದಾಗ ಮನೆ ಕಳೆದುಕೊಂಡವರಿಗೆ ನಮ್ಮ ಸರಕಾರ 5 ಲಕ್ಷ ರೂ. ಘೋಷಣೆ ಮಾಡಿ ತಕ್ಷಣ ಒಂದು ಲಕ್ಷ ರೂಪಾಯಿ ಬಿಡುಗಡೆ ಮಾಡಿತು. ನಮ್ಮ ಪ್ರಧಾನಮಂತ್ರಿ ಯಾವುದೇ ರೀತಿ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News