ವಿದೇಶಿ ಮೂಲದ ಅವಲಂಬನೆ ಕಡಿಮೆ ಮಾಡಲು ಸಹಕಾರಿ : ಬಿ.ಆರ್.ಲಕ್ಷ್ಮಣ್ ರಾವ್

Update: 2020-10-21 13:21 GMT

ಬೆಂಗಳೂರು, ಅ. 21: ಭಾರತೀಯ ಸಾರ್ವಜನಿಕ ಸಂಪರ್ಕ ವಲಯದಲ್ಲಿ ಲಭ್ಯವಿರುವ ಅಪಾರ ಸಾಹಿತ್ಯಿಕ ಜ್ಞಾನ ಮತ್ತು ಪ್ರಾಯೋಗಿಕ ಅಧ್ಯಯನವನ್ನು ಪ್ರಚುರಪಡಿಸಲು ಮತ್ತು ಇನ್ನು ಮುಂದೆ ವಿದೇಶಿ ಮೂಲ ಮತ್ತು ವಸ್ತುಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ಈ ಪುಸ್ತಕವನ್ನು ಹೊರತರಲಾಗಿದೆ ಎಂದು ಲೇಖಕ ಬಿ.ಆರ್.ಲಕ್ಷ್ಮಣ್ ರಾವ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ‘ಪಬ್ಲಿಕೇಶನ್ ವಿಂಗ್’ ಮತ್ತು ‘ಸಂವಹನ ದೃಷ್ಟಿಕೋನಗಳು’ ಪ್ರಥಮ ವೃತ್ತಿಪರ ಪುಸ್ತಕ ಲೋಕಾರ್ಪಣೆ ಮಾಡಿ ಮೊದಲ ಪ್ರತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಪಿಆರ್‌ಸಿಐ ತಿಳಿವಳಿಕೆ ನೀಡುವ ಸಮಾಜದಲ್ಲಿ ಜ್ಞಾನವನ್ನು ನೀಡಲು ಪ್ರಯತ್ನಿಸುತ್ತಿದೆ. ಸಾಹಿತ್ಯವು ಸಂವಹನದ ಒಂದು ರೂಪವಾಗಿದೆ ಮತ್ತು ಪಿಆರ್‌ಸಿಐ ತನ್ನ ಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಕೈಜೋಡಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಮಾತನಾಡಿ, ಮಿತಿ ಮೀರಿದ ಮಾಹಿತಿಗಳು ಅನಗತ್ಯ ಪ್ರವೃತ್ತಿಗಳಿಗೆ ಕಾರಣವಾಗಿದೆ, ಇದನ್ನು ಸರಿಯಾದ ಸಂವಹನದೊಂದಿಗೆ ನಿಭಾಯಿಸಬೇಕಾಗಿದೆ ಮತ್ತು ಅದನ್ನು ಅರ್ಥಪೂರ್ಣ ವಾಗಿಸಲು ಪಿಆರ್‌ಸಿಐ ದೊಡ್ಡ ಪಾತ್ರವನ್ನು ನಿರ್ವಹಿಸಬೇಕು. ಸರಿಯಾದ ಸಮಯಕ್ಕೆ, ಸರಿಯಾದ ಹಾಗೂ ಜವಾಬ್ದಾರಿಯುತ ಮಾಹಿತಿ ರವಾನಿಸುವಲ್ಲಿ ಸಾರ್ವಜನಿಕ ಸಂಪರ್ಕದ ಪ್ರಾಮುಖ್ಯತೆ ಬಹಳಷ್ಟಿದೆ ಎಂದು ಹೇಳಿದರು.

ಪಿಆರ್‌ಸಿಐನ ಎಮೆರಿಟಸ್‌ನ ಅಧ್ಯಕ್ಷ ಎಂ.ಬಿ.ಜಯರಾಮ್, ‘ಇದು ಪಿಆರ್‌ಸಿಐ ಇತಿಹಾಸದ ಮತ್ತೊಂದು ಮೈಲಿಗಲ್ಲು ಮತ್ತು ನಮ್ಮ ಪ್ರಕಟಣೆ ಗಳು ಸಾರ್ವಜನಿಕ ಸಂಪರ್ಕದ ಕ್ಷೇತ್ರದಲ್ಲಿ ಭವಿಷ್ಯದ ಕಲಿಕೆಗೆ ಒಂದು ಉಲ್ಲೇಖ ಸಾಮಗ್ರಿಯಾಗಲಿವೆ’ ಎಂದರು. ಪ್ರಧಾ ಸಂಪಾದಕ ಎಸ್.ನರೇಂದ್ರ, ಪಿಆರ್‌ಸಿಐ ಪುಸ್ತಕಗಳನ್ನು ಪ್ರಕಟಿಸುವ ಪ್ರಮುಖ ಕ್ಷೇತ್ರಕ್ಕೆ ಹೊಸ ಪ್ರಯಾಣವನ್ನು ಪ್ರಾರಂಭಿಸಿದೆ ಮತ್ತು ಈ ಉಪಕ್ರಮವು ಯಶಸ್ವಿಯಾಗಿ ಮುಂದುವರಿಯುವ ಆಶಯ ವ್ಯಕ್ತಪಡಿಸಿದರು.

ಬೆಂಗಳೂರು ವಿವಿ ಕುಲತಿ ಡಾ.ವೇಣುಗೋಪಾಲ್ ಮಾತನಾಡಿ, ಪಿಆರ್ ಇಂಡಸ್ಟ್ರಿ ವೇಗವಾಗಿ ಬದಲಾಗುತ್ತಿದೆ ಮತ್ತು ನೈತಿಕತೆ ಮತ್ತು ಪ್ರಾಮಾಣಿಕ ಬರವಣಿಗೆಯೊಂದಿಗೆ ಸಂವಹನದಲ್ಲಿ ವೈವಿಧ್ಯತೆಯು ಶಿಕ್ಷಣದ ತಿರುಳಾಗಿ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಜಿ.ಎನ್.ಮೋಹ್, ಬೆಂಗಳೂರು ಸಾರ್ವಜನಿಕ ಸಂಪರ್ಕ ಮಂಡಳಿಯ ಅಧ್ಯಕ್ಷೆ ಡಾ.ಲತಾ ಟಿ.ಎಸ್. ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

‘ಜಾಗತೀಕರಣದ ಯುಗದಲ್ಲಿ ತಾಂತ್ರಿಕ ಪ್ರಗತಿಗಳು ಹೆಚ್ಚು ಕೇಂದ್ರೀಕೃತ ಮಾಹಿತಿಯುಕ್ತ ಸಮಾಜಕ್ಕೆ ಕಾರಣವಾಗಿವೆ. ಆದರೆ, ಕೇವಲ ಮಾಹಿತಿ ಜ್ಞಾನವಲ್ಲ. ಆದುದರಿಂದ ಪಿಆರ್‌ಸಿಐ ಇಂತಹ ಪ್ರಕಟಣೆಗಳು ತಿಳಿವಳಿಕೆ ನೀಡುವ ಸಮಾಜದಲ್ಲಿ ಜ್ಞಾನವನ್ನು ನೀಡುತ್ತದೆ’
-ಜಿ.ಎನ್.ಮೋಹನ್ ಪುಸ್ತಕದ ಸಹಾಯಕ ಸಂಪಾದಕ ಮತ್ತು ಪ್ರಕಾಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News