ಸಾಂತ್ವನ ಕೇಂದ್ರಗಳ ಮುಚ್ಚಲು ಸರಕಾರ ಹುನ್ನಾರ : ಮೋಹಿನಿ ಸಿದ್ದೇಗೌಡ ಆರೋಪ

Update: 2020-10-21 13:29 GMT

ಚಿಕ್ಕಮಗಳೂರು, ಅ.21: ಶೋಷಣೆ, ದೌರ್ಜನ್ಯಕ್ಕೆ  ಒಳಗಾದ ಮಹಿಳೆಯರು, ಮಕ್ಕಳು ಸಾಂತ್ವನ ಕೇಂದ್ರಗಳಿಗೆ ದಾಖಲಾಗಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಇಂತವರ ಪಾಲಿಗೆ ಸಾಂತ್ವಾನ ಕೇಂದ್ರಗಳು ಆಶಾಕಿರಣವಾಗಿವೆ. ಆದರೆ, ಸರಕಾರ ರಾಜ್ಯದಲ್ಲಿರುವ ಎಲ್ಲ ಸಾಂತ್ವನ ಕೇಂದ್ರಗಳನ್ನು ಮುಚ್ಚುವ ಚಿಂತನೆಯಲ್ಲಿದೆ. ಮಹಿಳಾ ಮತ್ತು ಮಕ್ಕಳ ಸಾಂತ್ವನ ಕೇಂದ್ರಗಳನ್ನು ಮುಚ್ಚಲು ಮುಂದಾಗಿರುವ ಕ್ರಮದಿಂದ ಸರಕಾರ ಹಿಂದೆ ಸರಿಯಬೇಕು ಎಂದು ಕಸ್ತೂರಿಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸಾಂತ್ವನ ಕೇಂದ್ರಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿವೆ. ಶೋಷಣೆಗೊಳಗಾಗಿ ನೊಂದಿರುವ ಮಹಿಳೆಯರು, ಮಕ್ಕಳಿಗೆ ನ್ಯಾಯ ಒದಗಿಸುತ್ತಿವೆ. ಅವುಗಳ ನಿರ್ವಹಣೆಗೆ ಕೇವಲ 10 ಕೋಟಿ ರೂ. ಮಾತ್ರ ವೆಚ್ಚ ಆಗುತ್ತಿದೆ. ನೊಂದ ಮಕ್ಕಳು, ಮಹಿಳೆಯರ ನೆರವಿಗಾಗಿ ಇಷ್ಟು ಹಣವನ್ನು ಸರಕಾರಕ್ಕೆ ಖರ್ಚು ಮಾಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸವಾಗಿದೆ. ಈ ಹಿನ್ನೆಲೆಯಲ್ಲಿ ಸಾಂತ್ವನ ಕೇಂದ್ರಗಳನ್ನು ಸರಕಾರ ಮುಚ್ಚಬಾರದು ಎಂದರು.

ನಗರದಲ್ಲಿರುವ ಕಸ್ತೂರಿಬಾ ಕೌಟುಂಬಿಕ ಸಲಹಾ ಕೇಂದ್ರಕ್ಕೆ  ಕಳೆದ 6 ತಿಂಗಳ ಅವಯಲ್ಲಿ ಒಟ್ಟು 33 ಕೇಸುಗಳು ದಾಖಲಾಗಿದ್ದು ಅದರಲ್ಲಿ 8 ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.1 ನ್ಯಾಯಾಲಯಕ್ಕೆ,9 ಕೇಸುಗಳನ್ನು ಕೈಬಿಟ್ಟಿದ್ದು ಹಳೆಯ ಕೇಸುಗಳು ಸೇರಿ ಒಟ್ಟು 41 ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಕಸ್ತೂರಿಬಾ ಸಾಂತ್ವನ ಕೇಂದ್ರಕ್ಕೆ ಒಟ್ಟು 6 ತಿಂಗಳಲ್ಲಿ ವರದಕ್ಷಿಣೆ, ಕೌಟುಂಬಿಕ ಕಲಹ, ಅತ್ಯಾಚಾರ, ಬಹುಪತ್ನಿತ್ವ, ಲೈಂಗಿಕ ಕಿರುಕುಳ ಸೇರಿ ಒಟ್ಟು 55 ಕೇಸುಗಳು ದಾಖಲಾಗಿದ್ದು, 39ಅನ್ನು ಮುಕ್ತಾಯಗೊಳಿಸಲಾಗಿದೆ. ರಾಜಿ ಸಂಧಾನದ ಮೂಲಕ 30, ನ್ಯಾಯಾಲಯಕ್ಕೆ 2, 7 ಪ್ರಕರಣಗಳ್ನು ಕೈಬಿಡಲಾಗಿದೆ.16 ಪ್ರಕರಣ ಬಾಕಿ ಇವೆ ಎಂದ ಅವರು, ಸ್ವಾಧಾರ ಕೇಂದ್ರಕ್ಕೆ 47 ಪ್ರಕರಣಗಳು ಬಂದಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದ 16 ಮಹಿಳೆಯರು ಹಾಗೂ 11 ಮಕ್ಕಳು ಸೇರಿ ಒಟ್ಟು 27 ಜನರಿಗೆ ಆಶ್ರಯ ನೀಡಲಾಗಿದೆ ಎಂದರು.

ನಗರದ ಕಲ್ಯಾಣ ನಗರ ಬಡಾಣೆಯ ಮೊದಲ ತಿರುವಿನಲ್ಲಿ ತೆರೆದಿರುವ ಮದ್ಯದಂಗಡಿಯನ್ನು ಮುಚ್ಚಬೇಕು. ಆ ಬಡಾವಣೆಯಲ್ಲಿ ಎಡಿಸಿ, ಉದ್ಯಮಿ ಕೊಶೋರ್‍ಕುಮಾರ್ ಹೆಗ್ಡೆ  ಮತ್ತಿತರ ಪ್ರತಿಷ್ಠಿತರ ಮನೆಗಳಿವೆ. ನಾನೂ ಅಲ್ಲೇ ಇದ್ದೇನೆ. ಇಲ್ಲಿಯವರೆಗೆ ಯಾವೊಂದು ಗಲಾಟೆ, ಗದ್ದಲ ನಡೆದಿಲ್ಲ. ಅಷ್ಟೊಂದು ಪ್ರಶಾಂತ ಸ್ಥಳ. ಆದರೆ, ಈಗೊಬ್ಬರು ಅಲ್ಲಿ  ಮದ್ಯದಂಗಡಿ ತೆರೆಯುವ ಮೂಲಕ ಅಲ್ಲಿನ ವಾತಾವರಣವನ್ನೇ ಕಲುಷಿತ ಗೊಳಿಸಲು ಮುಂದಾಗಿದ್ದಾರೆ. ಶಾಂತಿ ಕದಡುವ ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ಹತ್ತಾರು ವರ್ಷ ಹೋರಾಡಿದ್ದಕ್ಕೆ 20-25 ವರ್ಷ ನ್ಯಾಯಾಲಯಕ್ಕೆ ಅಲೆದಿದ್ದೇನೆ. ಶಕ್ತಿ ನಗರದಲ್ಲಿ ತೆರೆದಿರುವ ಮದ್ಯದಂಗಡಿ ಮುಚ್ಚಿಸುವಂತೆ ಮಹಿಳೆಯರ ಒತ್ತಡದಿಂದ ಹೋರಾಡಿದಕ್ಕೆ ಯಾವುದೇ ಪ್ರಯೋಜನ ಆಗಲಿಲ್ಲ. ಹೀಗಾಗಿ ಈ ವಿಚಾರದಲ್ಲಿ ನಾನು ಬಹಳ ನಿರಾಶಳಾಗಿದ್ದೇನೆ. ಡಿಸಿ ಕೇಳಿದರೆ ಸರಕಾರವೇ ಮದ್ಯದಂಗಡಿ ತೆರೆಯಲು ಅನುಮತಿ ಕೊಟ್ಟರುವಾಗ ನಾವು ನಿರಾಕರಿಸಲಾಗದು ಎಂಬ ಉತ್ತರ ನೀಡುತ್ತಾರೆ. ಜಿಲ್ಲಾ ಉಸ್ತುವಾರಿ ಮಂತ್ರಿ ಕಲ್ಯಾಣ ನಗರ, ಶಕ್ತಿನಗರದಲ್ಲಿ ಆರಂಭಿಸಿರುವ ಮದ್ಯದಂಗಡಿಗಳನ್ನು ಮುಚ್ಚಿಸುವತ್ತ ಗಮನ ಹರಿಸಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.

ಕಸ್ತೂರಿಬಾ ಸದನದ ಅಧ್ಯಕ್ಷೆ ಯಮುನಾ ಚನ್ನಬಸಪ್ಪ ಈ ವೇಳೆ ಉಪಸ್ಥಿತರಿದ್ದರು.

ಸ್ವಾಧಾರಕ್ಕೆ ವಿಚಿತ್ರ ಕೇಸುಗಳು: ಇತ್ತೀಚೆಗೆ ತೆರೆಯಲ್ಪಟ್ಟ ಸ್ವಾಧಾರ ಕೇದ್ರಗಳಿಗೆ ವಿಚಿತ್ರ ಮತ್ತು ಆಶ್ಚರ್ಯಚಕಿತವಾದ ಪ್ರಕರಣಗಳು ದಾಖಲಾಗುತ್ತಿವೆ. ಚಿಕ್ಕಪ್ಪನೆ ಇಬ್ಬರು ಹೆಣ್ಣುಮಕ್ಕಳ ಮೇಲೆ ಲೈಂಗಕ ದೌರ್ಜನ್ಯ ನಡೆಸಿ ಜೈಲು ಪಾಲಾಗಿದ್ದಾನೆ. ಪದವೀದರೆ ಯೊಬ್ಬರು ಗಂಡನ ಹಿಂಸೆಯ ನೆಪ ಹೇಳಿ ಸ್ವಾಧಾರಕ್ಕೆ ದಾಖಲಾಗಿದ್ದರು. ಆದರೆ, ಅವರು ಒಂದು ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ ಎಂದು ರಾತ್ರಿ 10-11 ಗಂಟೆಗೆ ಕೇಂದ್ರಕ್ಕೆ ಬರುತ್ತಿದ್ದರು. ಸೂಕ್ಷ್ಮವಾಗಿ ಗಮನಿಸಿದಾಗ ಆಕೆಯ ವೃತ್ತಿಯೇ ಬೇರೆ ಆಗಿತ್ತು. ಒಬ್ಬಾಕೆ 6 ಮದುವೆ ಆಗಿ ಎಲ್ಲರಿಂದಲೂ ಹಣ ಕಿತ್ತು ಬೇರೊಬ್ಬನನ್ನು ಮದುವೆಯಾಗುವ ಖಯಾಲಿ ಬೆಳೆಸಿಕೊಂಡಿದ್ದವಳು. ಮದುವೆಯಾಗಿ ಮಗು ಹೆತ್ತ ಬಳಿಕ ಅದನ್ನು ಮರಾಟ ಮಾಡುವ ದಂಧೆಯನ್ನು ಒಬ್ಬಾಕೆ ಬೆಳೆಸಿಕೊಂಡಿದ್ದಳು. ಇಂತಹ ಹತ್ತಾರು ವಿಚಿತ್ರ ಪ್ರಕರಣಗಳು ಸ್ವಾಧಾರಕ್ಕೆ ಬರುತ್ತಿರುವುದನ್ನು ಗಮನಿಸಿದಾಗ ನಮ್ಮ ಸಮಾಜದ ಕೌಟುಂಬಿಕ ವ್ಯವಸ್ಥೆಯೇ ಎತ್ತ ಕಡೆ ಸಾಗುತ್ತಿದೆ ಎಂಬ ವ್ಯಥೆ ಆಗುತ್ತದೆ ಎಂದು ಮೋಹಿನಿ ಸಿದ್ದೇಗೌಡ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News