ನನ್ನ ಸರಕಾರದಲ್ಲಿ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರು, ಉಪನ್ಯಾಸಕರ ನೇಮಕ : ಮಾಜಿ ಸಿಎಂ ಸಿದ್ದರಾಮಯ್ಯ

Update: 2020-10-21 13:48 GMT

ಹುಬ್ಬಳ್ಳಿ, ಅ. 21: ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರಕಾರ ರಾಜ್ಯದ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರು, ಉಪನ್ಯಾಸಕರು, ಅತಿಥಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಯನ್ನು ನೇಮಕ ಮಾಡಿತ್ತು. ಈಗಿನ ಬಿಜೆಪಿ ಸರಕಾರ ಏನು ಮಾಡಿದೆ ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಸರಕಾರ 7905 ಪ್ರಾಥಮಿಕ ಶಾಲಾ ಶಿಕ್ಷಕರು, 1689 ಪ್ರೌಢಶಾಲಾ ಶಿಕ್ಷಕರು ಮತ್ತು ಹತ್ತು ಸಾವಿರ ಪದವೀಧರ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥಪಾಲಕರ ನೇಮಕ ಮಾಡಿತ್ತು. 2008 ರಿಂದ 2013ರ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇವಲ 5032 ಶಿಕ್ಷಕರನ್ನು ಮಾತ್ರ ನೇಮಕಾತಿ ಮಾಡಿತ್ತು ಎಂದು ಅವರು ಹೇಳಿದರು.

2016ರ ಜುಲೈ ತಿಂಗಳಿಂದ ಜಾರಿಯಾಗುವಂತೆ ಆರನೇ ವೇತನ ಆಯೋಗ ಜಾರಿ ಮಾಡಿದ್ದು ನಮ್ಮ ಸರಕಾರ. ಇದರಿಂದಾಗಿ ಶಿಕ್ಷಕರು-ಉಪನ್ಯಾಸಕರು ಸೇರಿದಂತೆ ಎಲ್ಲ ಸರಕಾರಿ ನೌಕರರ ಪಿಂಚಣಿ, ಭತ್ತೆ ಸೇರಿದಂತೆ ಒಟ್ಟು ವೇತನದ ಶೇ.30ರಷ್ಟು ಏರಿಕೆಯಾಗಿದೆ. ಇದರಿಂದ ರಾಜ್ಯದ ಬೊಕ್ಕಸದ ಮೇಲೆ ವಾರ್ಷಿಕ 10,200 ಕೋಟಿ ರೂ.ಹೊರೆ ಬಿದ್ದಿತ್ತು ಎಂದು ಸಿದ್ದರಾಮಯ್ಯ ತಿಳಿಸಿದರು.

ಶಿಕ್ಷಕರ ವೇತನ-ಸೌಲಭ್ಯಗಳ ವಿಚಾರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲಾ ಉದಾರವಾಗಿ ನಡೆದುಕೊಂಡಿದೆ. ಶಿಕ್ಷಕರ ಭಡ್ತಿ, ಅತಿಥಿ ಶಿಕ್ಷಕರ ಸಂಬಳ ಏರಿಕೆ ಮಾಡಿದ್ದೆವು. ಹೆರಿಗೆ ರಜೆಯನ್ನು ಮೂರರಿಂದ ಆರು ತಿಂಗಳಿಗೆ ಏರಿಕೆ ಮಾಡಿದ್ದೆವು, ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಸ್ಥಾಪನೆಯ ನಿರ್ಧಾರ ಮಾಡಿದ್ದೆವು ಎಂದು ಅವರು ಹೇಳಿದರು.

ಶಿಕ್ಷಕರು ಸೇರಿದಂತೆ ಸರಕಾರಿ ನೌಕರರು ಕೊರೋನ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ಸೂಕ್ತ ಸುರಕ್ಷತಾ ಸೌಲಭ್ಯಗಳನ್ನು ನೀಡಬೇಕು, ಸೋಂಕು ತಗುಲಿದರೆ ಗುಣಮಟ್ಟದ ಚಿಕಿತ್ಸೆ ಕೊಡಿಸಬೇಕು, ಸಾವಿಗೀಡಾದರೆ ಸರಿಯಾದ ಪರಿಹಾರ ಕೊಡಬೇಕು. ಕೇವಲ ಚಪ್ಪಾಳೆ ಹೊಡೆಸಿ, ಹೂ ಸುರಿಸಿ ಪ್ರಚಾರ ಪಡೆಯುವುದಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News