ಚಿಕ್ಕಮಗಳೂರು: ದಿಢೀರ್ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ

Update: 2020-10-21 14:06 GMT

ಚಿಕ್ಕಮಗಳೂರು, ಅ.21: ವಾಯುಭಾರ ಕುಸಿತದ ಪರಿಣಾಮ ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿರುವಂತೆ ಕಾಫಿನಾಡಿನಲ್ಲೂ ಬುಧವಾರ ಧಾರಾಕಾರ ಮಳೆ ಸುರಿಯಿತು. ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಹವಾಮಾನ ವೈಫರೀತ್ಯದ ಪರಿಣಾಮ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಧಾರಾಕಾರ ಮಳೆಯಾಗಿದ್ದು, ಮೂರು ದಿನಗಳಿಂದ ಜಿಲ್ಲಾ ದ್ಯಂತ ಮೋಡಕವಿದ ವಾತಾವರಣ ಹಾಗೂ ತುಂತುರು ಮಳೆ ಸಾಮಾನ್ಯವಾಗಿತ್ತು. ಆದರೆ ಬುಧವಾರ ಮಧ್ಯಾಹ್ನ ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಮಲೆನಾಡು ಭಾಗದ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಮಧ್ಯಾಹ್ನದಿಂದ ಸಂಜೆವರೆಗೂ ಧಾರಾಕಾರ ಮಳೆಯಾಗಿದೆ.

ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಸಂಜೆ ದಿಢೀರ್ ಮಳೆ ಸುರಿದ ಪರಿಣಾಮ ನಗರದ ಪ್ರಮುಖ ರಸ್ತೆಗಳ ಅಲ್ಲಲ್ಲಿ ರಸ್ತೆ ಮೇಲೆ ನೀರು ನಿಂತು ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಗರದ ಕೆಲವೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದ ಪರಿಣಾಮ ರಸ್ತೆಯ ಮೇಲೆ ಭಾರೀ ನೀರು ಸಂಗ್ರಹವಾಗಿ ವಾಹನ ಸಂಚಾರ ಕೆಲ ಹೊತ್ತು ಭಾರೀ ಸಮಸ್ಯೆ ಉಂಟಾಗಿತ್ತು. ನಗರದಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ನಗರದಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News