ನಮ್ಮ ದೇಶಕ್ಕೂ ರಾಜಕೀಯ ಸಾಹಿತ್ಯ ಬೇಕು: ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್

Update: 2020-10-21 14:09 GMT

ಮೈಸೂರು, ಅ.21: ಮಂಡ್ಯ ಜಿಲ್ಲೆ ರಾಜ್ಯಕ್ಕೆ ಅತಿರಥ ರಾಜಕಾರಣಿಗಳನ್ನು ನೀಡಿದೆ. ಇಡೀ ದೇಶದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಯಲಲಿತಾ ಮಂಡ್ಯದವರು. ಮಂಡ್ಯ ಲೋಕಸಭಾ ಚುನಾವಣೆ ಸತ್ತ ಅಂಬರೀಶನನ್ನು ಸಶಕ್ತ ಅಂಬರೀಶನನ್ನಾಗಿ ಮಾಡಿದ್ದು ಇದೇ ಚುನಾವಣೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ 25ನೇ  “ಮತ ಭಿಕ್ಷೆ” ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಗತ್ತಿನ ಅತ್ಯಂತ ಎತ್ತರದ ಪ್ರಜಾಪ್ರಭುತ್ವವನ್ನು ಎತ್ತಿ, ಅಪ್ಪಿ, ಒಪ್ಪಿರುವ ದೇಶ ನಮ್ಮದು. ನಮ್ಮಲ್ಲಿ ಶಿಷ್ಟ ಸಾಹಿತ್ಯ, ಶಿಶು ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಶರಣ ಸಾಹಿತ್ಯ ಇದೆ ಆದರೆ ರಾಜಕೀಯ ಸಾಹಿತ್ಯವಿಲ್ಲ.  ರಾಜಕಾರಣಿಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳನ್ನು ದೂರವಿಡಿ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ.

ಮಂಡ್ಯ ಜಿಲ್ಲೆ ರಾಜ್ಯಕ್ಕೆ ಅತಿರಥ ರಾಜಕಾರಣಿಗಳನ್ನು ನೀಡಿದೆ. ಇಡೀ ದೇಶದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಯಲಲಿತಾ ಮಂಡ್ಯದವರು. ಮಂಡ್ಯ ಲೋಕಸಭಾ ಚುನಾವಣೆ ಸತ್ತ ಅಂಬರೀಶರನ್ನು ಸಶಕ್ತ ಅಂಬರೀಶರನ್ನಾಗಿ ಮಾಡಿದ್ದು ಇದೇ ಚುನಾವಣೆ. ಚುನಾವಣಾ ಸಂದರ್ಭದಲ್ಲಿ ಕೆಲ ನಾಯಕರ ಹೇಳಿಕೆಗಳು ಸುಮಲತಾ ಎಂಬ ಹೆಣ್ಣು ಮಗಳನ್ನು ಇಡೀ ದೇಶಕ್ಕೆ ಪರಿಚಯಿಸಿತು ಎಂದು ನುಡಿದರು.

ಕೆಲವರು ವಿಶ್ವನಾಥ್ ನನ್ನು ಅವಹೇಳನ ಮಾಡಿದರು. ವಿಶ್ವನಾಥ್ ಗೇಕೆ ಸಾಹಿತ್ಯ ಕೋಟಾದಡಿ ವಿಧಾನಪರಿಷತ್ ಸ್ಥಾನ  ನೀಡಿದ್ದಾರೆ ಎಂದು ಕೆಲವರು ಜರಿದರು. ನಾನೇನು ಕಾಗಕ್ಕ ಗೂಬಕ್ಕ ಕಥೆ ಬರೆದಿಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಇಟ್ಟುಕೊಂಡೇ ನಾನು “ಮತ ಸಂತೆ” ಸೇರಿದಂತೆ  ಹಲವು ಪುಸ್ತಕಗಳನ್ನು ಬರೆದಿರುವುದು. ಏನಾದರೂ ಹೇಳಿದರೆ ವಿಶ್ವನಾಥ್ ಒಬ್ಬ ವಿವಾದಾತ್ಮಕ ವ್ಯಕ್ತಿ ಎನ್ನುತ್ತಾರೆಂದು ಬೇಸರ ವ್ಯಕ್ತಪಡಿಸಿದರು.

ಕನ್ನಡಕ್ಕೊಂದು ಸಚಿವಾಲಯ ಇರಲಿಲ್ಲ. ಕೇವಲ ನಿರ್ದೇಶನಾಲಯವಿತ್ತು. ಇದ್ಯಾವುದಕ್ಕೂ ಆಗಿನ ಸಾಹಿತಿಗಳು ತಲೆಕೆಡಿಸಿಕೊಂಡಿರಲಿಲ್ಲ. ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು. ಧಂ ಇದ್ಯಾ ಅವನಿಗೆ, ಗೊತ್ತಿಲ್ವಾ ನೀನು ಕಡಿದದ್ದು?. ಇವೆಲ್ಲಾ ರಾಜಕೀಯ ಭಾಷೆನಾ? ಎಂದು ಪ್ರಶ್ನಿಸಿದ ಹೆಚ್.ವಿಶ್ವನಾಥ್, ರಾಜಕಾರಣಿ ಇಂತಹ ಭಾಷೆನಾ ಬಿಡಬೇಕು. ಇದನ್ನು ನಾನು ಹೇಳಿದ್ರೆ ನಾನು ವಿವಾದಾತ್ಮಕ ವ್ಯಕ್ತಿ ಅಂತಾರೆ. ರಾಜಕಾರಣಿಗಳನ್ನು ಶಿಕ್ಷಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಎಲ್ಲಾ ಸಾಹಿತ್ಯಕ್ಕೂ ಬೆಲೆ ಕೊಡುತ್ತಾರೆ. ಆದರೆ ರಾಜಕೀಯ ಸಾಹಿತ್ಯವನ್ನು ಕಡೆಗಣಿಸಲಾಗುತ್ತಿದೆ. ದೇಶಕ್ಕೆ ರಾಜಕೀಯ ಅಕಾಡೆಮಿ ಬೇಕು. ರಾಜಕಾರಣಿಗಳಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಬೇಕು. ಪತ್ರಿಕೋದ್ಯಮ ವಿಭಾಗದಲ್ಲೂ ರಾಜಕಾರಣಿಗಳನ್ನು ಪರಿಗಣಿಸುತ್ತಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ನಿರಂಜನ ವಾನಳ್ಳಿ ಪುಸ್ತಕ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ತನು ಮನು ಪ್ರಕಾಶನದ ಮಾಲೀಕ ಮಾನಸ, ಕೃತಿ ಲೇಖಕ ಐತಿಚಂಡ ರಮೇಶ್ ಉತ್ತಪ್ಪ ಉಪಸ್ಥಿತರಿದ್ದರು.

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಎಚ್.ವಿಶ್ವನಾಥ್
ಮೈಸೂರು: ತಂಗಳು ಅನ್ನಕ್ಕೆ ಹೋಟೆಲ್‍ನಿಂದ ಸಾಂಬರ್ ತಂದು ಮುಖ್ಯಮಂತ್ರಿ ಸ್ಥಾನದ ಎತ್ತರಕ್ಕೆ ಬೆಳೆದವರು ಸಿದ್ದರಾಮಯ್ಯ, ಇನ್ನೂ ಜಾತಿಯ ಬೆಂಬಲ ವಿಲ್ಲದೆ ಸಾಮಾನ್ಯ ವ್ಯಕ್ತಿಯಾಗಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಜನಮಾನಸದಲ್ಲಿ ಉಳಿದುಕೊಂಡವರು ಡಿ.ದೇವರಾಜ ಅರಸು. ಮೈಸೂರು ಜಿಲ್ಲೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಈ ಇಬ್ಬರು ನಾಯಕರ ಬಗ್ಗೆ ಪುಸ್ತಕ ಬರೆದು ದಾಖಲೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತು ಹಾಡಿ ಹೊಗಳಿದರು.

ನಮ್ಮ ಮುಂದಿನ ಯುವಪೀಳಿಗೆಗೆ ಇತಿಹಾಸವನ್ನು ನೆನಪಿಸುವ ಸಲುವಾಗಿ ಕೆಲವು ವಿಚಾರಗಳನ್ನು ದಾಖಲೆ ರೂಪದಲ್ಲಿ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಸಾಮಾಜಿಕ ಕಾಳಜಿ ಹೊಂದಿರುವ ನಾವು ಪುಸ್ತಕಗಳನ್ನು ಬರೆಯಬೇಕಿದೆ. ಹಿಂದಿನ ಮತ್ತು ಇಂದಿನ ಆಗು ಹೋಗುಗಳ ಕುರಿತು ದಾಖಲೆ ಮಾಡಬೇಕಿದೆ ಎಂದು ಹೇಳಿದರು.

ಒಂದು ಸಣ್ಣ ಹಳ್ಳಿಯಿಂದ ಮೈಸೂರಿಗೆ  ಬಂದು ತಂಗಳು ಅನ್ನಕ್ಕೆ ಹೋಟೆಲ್‍ನಿಂದ ಸಾಂಬರ್ ತಂದು ಊಟ ಮಾಡುತ್ತಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದು ಅಷ್ಟು ಸುಲಭದ ಕೆಲಸವಲ್ಲ, ಅವರು ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಕಲಸ ಮಾಡುತ್ತಿರವುದು ಒಂದು ದಾಖಲೆ. ಅವರು ಮಾಡಿರುವ ಸಾಧನೆ ಮತ್ತು ಕೆಲಸಗಳ ಕುರಿತು ದಾಖಲು ಮಾಡಬೇಕು. ಇದು ಮುಂದಿನ ಯುವ ಪೀಳಿಗೆಗೆ ತಿಳಿಯಬೇಕು ಆ ನಿಟ್ಟಿನಲ್ಲಿ ನಾವುಗಳು ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಜಿಲ್ಲೆಯ ಮತ್ತೊಬ್ಬ ನಾಯಕ ಡಿ.ದೇವರಾಜ್ ಅರಸು ಅವರು ಜಾತಿಯ ಬಲವೇ ಇಲ್ಲದೆ ರಾಜ್ಯ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಇವರೊಬ್ಬ ಮಾಸ್ ಲೀಡರ್, ಅವರು ಎಮರ್ಜೆನ್ಸಿ ಸಮಯದಲ್ಲಿ ಕೈಗೊಂಡ ತೀರ್ಮಾನಗಳು ಮತ್ತು ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿದ ಜನಪರ ಕೆಲಸಗಳು ಎಲ್ಲೂ ದಾಖಲಾಗಿಲ್ಲ. ಅವುಗಳನ್ನು ಪುಸ್ತಕದಲ್ಲಿ ದಾಖಲು ಮಾಡಬೇಕಿದೆ. ಈ ಇಬ್ಬರು ನಾಯಕರುಗಳ ಸಾಧನೆ ಕುರಿತು ಪುಸ್ತಕ ಬರೆಯಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News