ಜನರ ಕಷ್ಟಕ್ಕೆ ಸ್ಪಂದಿಸಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ: ಡಿ.ಕೆ ಶಿವಕುಮಾರ್

Update: 2020-10-21 14:48 GMT

ತುಮಕೂರು: ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂತ್ರಿಗಳು ಹಿಂದೆಯೂ ಹೋಗಿಲ್ಲ, ಈಗಲೂ ಹೋಗುವುದಿಲ್ಲ. ಒಬ್ಬರು ಪ್ರವಾಹ ಬಂದಿಲ್ಲ ಅಂತಾರೆ, ಮತ್ತೊಬ್ಬರು ಆರೋಗ್ಯ ಸರಿ ಇಲ್ಲ ಅಂತಾರೆ, ಮತ್ತೊಬ್ಬರು ತಮಗೆ ಸಮಸ್ಯೆ ಇದೆ ಅಂತಾರೆ. ಇನ್ನು ಶಿರಾದಲ್ಲಿ ರೈತರು ಬೆಳೆದ ಕಡಲೆಕಾಯಿ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿದ್ದರೂ ಆ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿರುವ ಶಿವಕುಮಾರ್ ಅವರು, ಬುಧವಾರ ಮಾಧ್ಯಮಗಳ ಜತೆ ಮಾತನಾಡಿದರು.

ರಾಜ್ಯದಲ್ಲಿ ಸರ್ಕಾರ ಇಲ್ಲದಿರುವ ಕಾರಣಕ್ಕೆ ಯಡಿಯೂರಪ್ಪನವರು ಈ ಚುನಾವಣೆಯನ್ನು ನನ್ನ ಮಗನ ನೇತೃತ್ವದಲ್ಲಿ ನಡೆಸುತ್ತೇವೆ ಎಂದಿದ್ದಾರೆ. ಅಶ್ವಥ್ ನಾರಾಯಣ ಅವರು ವೈದ್ಯಕೀಯ ಶಿಕ್ಷಣ ಸಚಿವರು, ನನ್ನ ವರ್ಣಿಸಲು ಅವರ  ಡಿಕ್ಷ್ ನರಿಯಲ್ಲಿ ಬೇರೆ ಪದ ಸಿಕ್ಕರೆ ಅದನ್ನೂ ಹೇಳಲಿ ನಾನು ಸ್ವೀಕರಿಸುತ್ತೇನೆ. ಬಿಜೆಪಿಯವರು ಯಡಿಯೂರಪ್ಪನವರನ್ನು ಕೆಳಗಿಳಿಸಲು ಏನೇನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ನಮ್ಮ ಬಳಿಯೂ ಬೇರೆ ಬೇರೆ ಮಾಹಿತಿ ಇದೆ. ಅವರ ಪಾರ್ಟಿ ಅವರು ಏನಾದರೂ ಮಾಡಿಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಹೇಳಿದರು.

ನಾನು ಪಕ್ಷ ಕಟ್ಟಲು ಒಬ್ಬ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ಪಕ್ಷದಲ್ಲಿ ಯಾವ ರೇಸು ಇಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಮೊದಲು ಕಾರ್ಯಕರ್ತ. ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ನನ್ನ ಮೇಲೆ ವಿವಿಧ ಇಲಾಖೆಗಳ ಮೂಲಕ ದಾಳಿ ಮಾಡಿರುವುದು ಒಳ್ಳೆಯದೋ ಅಥವಾ ಕೆಟ್ಟದ್ದೊ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ನಾವು ಸದ್ಯಕ್ಕೆ ಚುನಾವಣೆ ಮಾಡೋಣ. ನಾವು ಚುನಾವಣೆ ಬಗ್ಗೆ ನಮ್ಮ ಆಂತರಿಕ ಸಮೀಕ್ಷೆ ನಡೆಸಿ ವರದಿ ಪಡೆದಿದ್ದೇವೆ. ನಮಗೆ ಅಚ್ಚರಿಯಾಗೋ ರೀತಿಯಲ್ಲಿ ಜನ ಬೆಂಬಲ ತೋರಿಸುತ್ತಿದ್ದಾರೆ. ನಮಗೆ ಶೇ.44ರಷ್ಟು ಜನ ಬೆಂಬಲ ನೀಡಿದರೆ, ಒಂದು ಪಕ್ಷಕ್ಕೆ ಶೇ.22 ಹಾಗೂ ಮತ್ತೊಂದು ಪಕ್ಷಕ್ಕೆ ಶೇ.21ರಷ್ಟು ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News