ಪ್ರತಿಕೂಲ ಹವಾಮಾನ : ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮೊಟಕು

Update: 2020-10-21 14:50 GMT

ಕಲಬುರಗಿ, ಅ.21: ಅತಿವೃಷ್ಟಿ ಮತ್ತು ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಅರಿಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ನಡೆಸಿದ ವೈಮಾನಿಕ ಸಮಿಕ್ಷೆಯು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಮೊಟಕುಗೊಂಡಿತು.

ಇಂದು ಬೆಳಗ್ಗೆ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬಳ್ಳಾರಿಗೆ ತೆರಳಿದ ಮುಖ್ಯಮಂತ್ರಿ, ಸೇನಾ ಹೆಲಿಕಾಪ್ಟರ್ ನಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ಈ ವೇಳೆ ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದರು. ಕಲಬುರಗಿಯಿಂದ ವಿಜಯಪುರದ ಆಲಮಟ್ಟಿಗೆ ತೆರಳಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣ ಹೆಲಿಕಾಪ್ಟರ್ ಹಾರಾಟ ಸಾಧ್ಯವಾಗಲಿಲ್ಲ. ಇದರಿಂದಾಗಿ, ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕಲಬುರಗಿ, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ, ನೆರೆ ಹಾವಳಿ, ಪ್ರವಾಹಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಿದರು. ಆನಂತರ ಕಲಬುರಗಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಹಿಂದಿರುಗಿದರು.

ವಿಧಾನ ಪರಿಷತ್ ಹಾಗೂ ಶಿರಾ, ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೆ ಪರಿಹಾರವನ್ನು ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದರು.

ಕಲಬುರಗಿ ನಗರ ಮತ್ತು ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಮಳೆಯಿಂದಾಗಿ ಅನೇಕ ಕಡೆ ವಿದ್ಯುತ್ ಕಂಬಗಳು ಬಿದ್ದು ಹೋಗಿವೆ. ಇದರಿಂದ, ವಿದ್ಯುತ್ ಸಮಸ್ಯೆಯು ಇದೆ. ಈ ಸಮಸ್ಯೆಗಳನ್ನು ಆದ್ಯತೆ ಮೇಲೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ನಿಯಮಗಳ ಪ್ರಕಾರ ಮನೆ ಹಾಗೂ ಬೆಳೆ ಹಾನಿಗೆ ಪರಿಹಾರ ನೀಡಲಾಗುವುದು. ಪ್ರವಾಹದಿಂದ ನಲುಗಿರುವ ನಾಲ್ಕು ಜಿಲ್ಲೆಗಳ ಸುಮಾರು 14 ತಾಲೂಕುಗಳಲ್ಲಿ ಸಮಸ್ಯೆ ತಲೆದೋರಿದೆ. ಇದರಿಂದಾಗಿ, 247 ಗ್ರಾಮಗಳು ಬಾಧಿತವಾಗಿವೆ. ಕಂದಾಯ ಹಾಗು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿದ ನಂತರ ಹಾನಿಯ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೇಂದ್ರದಿಂದ ನೆರವಿನ ಭರವಸೆ

ವೈಮಾನಿಕ ಸಮೀಕ್ಷೆ ಆರಂಭಿಸುವ ಮುನ್ನ ಬಳ್ಳಾರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅತಿವೃಷ್ಟಿಯಿಂದ ನಲುಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ರಾಜ್ಯ ಸರಕಾರದಿಂದ ಈಗಾಗಲೆ ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ಜೊತೆಯೂ ಚರ್ಚೆ ನಡೆಸಿದ್ದು, ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News