ಆಪರೇಷನ್ ಕಮಲದ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2020-10-21 15:52 GMT

ಬೆಂಗಳೂರು, ಅ.21: ರಾಜ್ಯದಲ್ಲಿ ನಡೆದಿರುವ ಆಪರೇಷನ್ ಕಮಲದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿದ ನಿಜವಾದ ‘ಮೀರ್ ಸಾದಿಕ್’ ಯಾರು ಅನ್ನೋದು ಗೊತ್ತಾಗುತ್ತದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಯಾವ ರೀತಿ ಅಸ್ತಿತ್ವಕ್ಕೆ ಬಂದಿದೆ ಎಂಬುದರ ಬಗ್ಗೆ ತನಿಖೆಯಾದರೆ ಮೀರ್ ಸಾದಿಕ್ ಯಾರು ಅನ್ನೋದನ್ನು ಬಯಲಾಗುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ‘ಮೀರ್ ಸಾದಿಕ್’ ಎಂದು ಕರೆದಿರುವ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ತಮ್ಮ ಆರೋಪಕ್ಕೆ ವಿವರಣೆ ನಿಡಬೇಕು. ಇಲ್ಲವೇ, ತಾವು ಆಡಿರುವ ಮಾತನ್ನು ವಾಪಸ್ ಪಡೆಯುತ್ತಿರುವುದಾಗಿ ಬಹಿರಂಗವಾಗಿ ತಿಳಿಸಬೇಕು ಎಂದು ಅವರು ಹೇಳಿದರು.

ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ ಕಳೆದ ಒಂದು ವರ್ಷದಲ್ಲಿ 35 ಕೋಟಿ ರೂ.ಹೆಚ್ಚಾಗಿದೆ. ಆಪರೇಷನ್ ಕಮಲದಿಂದ ಈ ಹಣ ಬಂದಿದೆ. ಚುನಾವಣಾ ಆಯೋಗವು ಪಾರದರ್ಶಕವಾಗಿದ್ದರೆ, ಈ ಸಂಬಂಧ ರಾಜ್ಯ ಸರಕಾರ ಹಾಗೂ ಮುನಿರತ್ನ ವಿರುದ್ಧ ತನಿಖೆ ನಡೆಸಲಿ. ಸಿಬಿಐ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News