ಪರೋಲ್‌ನಲ್ಲಿ ಬಿಡುಗಡೆಯಾದ ಹಂತಕನಿಂದ ಮತ್ತೊಂದು ಕೊಲೆ !

Update: 2020-10-22 04:54 GMT

ಹೊಸದಿಲ್ಲಿ : ಕೊಲೆ ಆರೋಪವೊಂದರಲ್ಲಿ ಜೀವಾವಧಿ ಶಿಕ್ಷೆಯಾಗಿದ್ದ 42 ವರ್ಷ ವಯಸ್ಸಿನ ಕೈದಿ ಪರೋಲ್‌ನಲ್ಲಿ ಬಿಡುಗಡೆಯಾಗಿ ಜೈಲಿನಿಂದ ಹೊರಗಿದ್ದ ಸಂದರ್ಭದಲ್ಲಿ ಜೂಜಿಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ಮತ್ತೆ ವ್ಯಕ್ತಿಯೊಬ್ಬನನ್ನು ಕೊಂದ ಪ್ರಕರಣ ನಡೆದಿದೆ.

ದಕ್ಷಿಣ ದೆಹಲಿಯ ತುಘಲಕಾಬಾದ್ ಗ್ರಾಮದಲ್ಲಿ ಮಂಗಳವಾರ ನಸುಕಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ವಿಶ್ವಜಿತ್ ಎಂದು  ಪೊಲೀಸರು ಹೇಳಿದ್ದಾರೆ.

ದೇಶದಲ್ಲಿ ಕೋವಿಡ್-19 ಉತ್ತುಂಗದಲ್ಲಿದ್ದಾಗ ಜೈಲು ದಟ್ಟಣೆಯನ್ನು ಕಡಿಮೆ ಮಾಡುವ ಕ್ರಮವಾಗಿ ವಿಶ್ವಜಿತ್ ಸೇರಿದಂತೆ 4000 ಕೈದಿಗಳನ್ನು ವಿಶೇಷ ಪರೋಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಮಂಗಳವಾರ ಕೊಲೆಗೆ ಬಳಸಿದ ಚಾಕು ಸಹಿತ ವಿಶ್ವಜಿತ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗೋವಿಂದಪುರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಈ ಹಿಂದೆ ಆರು ಡಕಾಯಿತಿ ಪ್ರಕರಣಗಳಲ್ಲಿ ಮತ್ತು ಶಸ್ತ್ರಾಸ್ತ್ರಗಳ ಕಾಯ್ದೆ ಉಲ್ಲಂಘಿಸಿದ ಪ್ರಕರಣದಲ್ಲಿ ಷಾಮೀಲಾಗಿದ್ದ. ಚಿತ್ತರಂಜನ್ ಪಾರ್ಕ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ 10 ವರ್ಷ ಜೈಲಿನಲ್ಲಿ ಕಳೆದಿದ್ದ ಎಂದು ಹೇಳಿದ್ದಾರೆ.

ಆನ್‌ಲೈನ್ ಜೂಜಿನಲ್ಲಿ ವಿಕಿ ಗುಪ್ತಾ ಎಂಬಾತ ತನ್ನ ಸಹೋದರ ಕುಲದೀಪ್ ಗುಪ್ತಾ, ವಿಶ್ವಜಿತ್ ಮತ್ತು ಅವರ ಸ್ನೇಹಿತ ರಾಜಾ ಜತೆ 70 ಸಾವಿರ ರೂಪಾಯಿಗಳನ್ನು ಗೆದ್ದಿದ್ದ. ಈ ಸಂಬಂಧ ಆರಂಭವಾದ ವಾಗ್ವಾದ ವಿಕೋಪಕ್ಕೆ ತಿರುಗಿ ವಿಶ್ವಜಿತ್ ವಿಕಿ ಗುಪ್ತಾ ರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ವಿವರ ನೀಡಿದ್ದಾರೆ.

ವಿಕಿ ಗುಪ್ತಾ ಆಟದಲ್ಲಿ ವಂಚನೆ ಮಾಡಿದ್ದು, ತಾನು ಕಳೆದುಕೊಂಡ ಹಣವನ್ನು ಮರಳಿಸಬೇಕು ಎಂದು ವಿಶ್ವಜಿತ್ ಒತ್ತಾಯಿಸಿದ್ದ. ಈ ಸಂಬಂಧ ವಾಗ್ವಾದ ನಡೆದು ವಿಶ್ವಜಿತ್ ಚಾಕುನಿಂದ ವಿಕಿ ಗುಪ್ತಾ ಅವರ ಎದೆಗೆ ಚುಚ್ಚಿ ಪರಾರಿಯಾದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News