ಬಿಹಾರಕ್ಕೆ 'ಉಚಿತ ಕೋವಿಡ್ ಲಸಿಕೆ' ಭರವಸೆ ನೀಡಿದ ನಿರ್ಮಲಾ ಸೀತಾರಾಮನ್ ರನ್ನು ಟೀಕಿಸಿದ ಪತ್ರಕರ್ತರು, ರಾಜಕಾರಣಿಗಳು

Update: 2020-10-22 11:43 GMT

ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯಲ್ಲಿ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಕೋವಿಡ್ ಲಸಿಕೆ ಒದಗಿಸುವ ಭರವಸೆ ನೀಡಲಾಗಿರುವುದು ಪತ್ರಕರ್ತರು, ರಾಜಕಾರಣಿಗಳ ಸಹಿತ ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇಂದು ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ "ಕೋವಿಡ್-19 ಲಸಿಕೆ ಲಭ್ಯವಾಗಿ ಅದನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸಿದ ಕೂಡಲೇ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಲಸಿಕೆ ದೊರೆಯಲಿದೆ. ಇದು ನಮ್ಮ ಚುನಾವಣಾ ಪ್ರಣಾಳಿಕೆಯ ಮೊದಲ ಭರವಸೆ,'' ಎಂದು ಹೇಳಿರುವುದು ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಗಿದೆ.

ಕೋವಿಡ್ ಲಸಿಕೆಯು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಹಾಗೂ ಅತ್ಯಂತ ಹೆಚ್ಚು ಅಪಾಯ ಇರುವವರಿಗೆ ತಲುಪಿಸುವ ಬದಲು ಅದನ್ನು ರಾಜಕೀಯ ಅಸ್ತ್ರವಾಗಿಸಲಾಗುವುದೇ ಎಂಬ ಆತಂಕ ಮೂಡಿದೆ ಎಂದು ಟ್ವಿಟರಿಗರೊಬ್ಬರು ಪ್ರತಿಕ್ರಿಯಿಸಿದರೆ ಇನ್ನೊಬ್ಬರು ತಮ್ಮ ಟ್ವೀಟ್‍ನಲ್ಲಿ "ಭಾರತದ ವಿತ್ತ ಸಚಿವೆ ಕೋವಿಡ್ ಲಸಿಕೆಯನ್ನು ಬಿಹಾರದಲ್ಲಿ ಚುನಾವಣೆ ಗೆಲ್ಲಲು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ,'' ಎಂದಿದ್ದಾರೆ.

ಹಿರಿಯ ಪತ್ರಕರ್ತೆ ಸಾಗರಿಕಾ ಘೋಸ್ ಪ್ರತಿಕ್ರಿಯಿಸಿ "ಪ್ರತಿಯೊಬ್ಬ ನಾಗರಿಕನಿಗೂ ಒದಗಿಸಬೇಕಿರುವ ಆರೋಗ್ಯ ಸೇವೆಯನ್ನು ಪಕ್ಷ ರಾಜಕಾರಣಕ್ಕಾಗಿ ಚುನಾವಣೆ ಸಂದರ್ಭ ಸಚಿವರು ಬಳಸುವ ಹಾಗಿಲ್ಲ. ಬಿಹಾರವು ಬಿಜೆಪಿಗೆ ಮತ ನೀಡಲಿ ಅಥವಾ ಬಿಡಲಿ, ಎಲ್ಲಾ ನಾಗರಿಕರಿಗೂ ಕೋವಿಡ್ ಲಸಿಕೆ ಸಮಾನವಾಗಿ ದೊರೆಯಬೇಕು,'' ಎಂದು ಟ್ವೀಟ್ ಮಾಡಿದ್ದಾರೆ. ಪತ್ರಕರ್ತೆ ಫೇ ಡಿ'ಸೋಜ ತಮ್ಮ ಟ್ವೀಟ್ ನಲ್ಲಿ  ``ಇತರ ರಾಜ್ಯಗಳಿಗೂ ಉಚಿತ ಲಸಿಕೆ ದೊರೆಯಲಿದೆಯೇ? ಬಿಹಾರಕ್ಕೆ ಮೊದಲು ದೊರಕಲಿದೆಯೇ? ಬಿಜೆಪಿ ಬಿಹಾರದಲ್ಲಿ ಸೋತರೂ ಉಚಿತ ಲಸಿಕೆ ದೊರೆಯಲಿದೆಯೇ? ಇದಕ್ಕೆ ಯಾರು ಹಣ ನೀಡುತ್ತಾರೆ ರಾಜ್ಯ ಅಥವಾ ಕೇಂದ್ರ ಸರಕಾರ?'' ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಅಥವಾ ಎನ್‍ಡಿಎ ಅಧಿಕಾರಕ್ಕೆ ಬರದೇ ಇದ್ದರೆ ಏನಾಗುತ್ತದೆ ಎಂದೂ ಹಲವರು ಪ್ರಶ್ನಿಸಿದ್ಧಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ತಮ್ಮ ಟ್ವೀಟ್‍ನಲ್ಲಿ "ಬಿಜೆಪಿ ಈ ಲಸಿಕೆಗಳಿಗೆ ತನ್ನ ಪಕ್ಷದ ಬೊಕ್ಕಸದಿಂದ ಖರ್ಚು ಮಾಡಲಿದೆಯೇ?'' ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಕೋವಿಡ್ ಲಸಿಕೆ ಭರವಸೆ ಕುರಿತು ಸಮರ್ಥನೆಗೆ ನಿಂತಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯ ಪ್ರತಿಕ್ರಿಯಿಸಿ "ಬಿಜೆಪಿ ಪ್ರಣಾಳಿಕೆ ಉಚಿತ ಕೋವಿಡ್ ಲಸಿಕೆಯ ಭರವಸೆ ನೀಡಿದೆ. ಎಲ್ಲಾ ಯೋಜನೆಗಳಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಕನಿಷ್ಠ ದರದಲ್ಲಿ ಲಸಿಕೆ ಒದಗಿಸಿದ ನಂತರ ಅವುಗಳನ್ನು ಉಚಿತವಾಗಿ ಅಥವಾ ಹಣಕ್ಕೆ ಒದಗಿಸುವುದು ರಾಜ್ಯ ಸರಕಾರಗಳಿಗೆ ಬಿಟ್ಟಿದ್ದು. ಬಿಹಾರ ಬಿಜೆಪಿ ಲಸಿಕೆಗಳನ್ನು ಉಚಿತವಾಗಿ ಒದಗಿಸಲು ನಿರ್ಧರಿಸಿದೆ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News