25 ಜಿಲ್ಲೆಗಳ 173 ತಾಲೂಕುಗಳು ಪ್ರವಾಹ ಪೀಡಿತ: ಸಚಿವ ಆರ್.ಅಶೋಕ್

Update: 2020-10-22 15:32 GMT

ಬೆಂಗಳೂರು, ಅ.22: 2020ರಲ್ಲಿ 25 ಜಿಲ್ಲೆಗಳ 173 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವಂತಹ ವಾಯುಭಾರ ಕುಸಿತದಿಂದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಉತ್ತರಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಭಾರಿ ಮಳೆಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಅವಧಿಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.245ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಗೆ ಉತ್ತರ ಒಳನಾಡಿನಲ್ಲಿ ಶೇ.331ರಷ್ಟು ಅಧಿಕ ಹಾಗೂ ಕರಾವಳಿ ಭಾಗದಲ್ಲಿ ಶೇ.435ರಷ್ಟು ಹೆಚ್ಚು ಮಳೆಯಾಗಿದೆ. ಕಲಬುರಗಿ, ಬೀದರ್, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಳಗಾವಿ, ಯಾದಗಿರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದರು.

ಭೀಮ ನದಿಯ ಪ್ರವಾಹದಿಂದಾಗಿ ವಿಜಯಪುರ ಜಿಲ್ಲೆಯ ಇಂಡಿ, ಚಡಚಣ ಹಾಗೂ ಸಿಂಧಗಿ ತಾಲೂಕುಗಳು, ಕಲಬುರಗಿ ಜಿಲ್ಲೆಯ ಅಫ್ಝಲ್‍ಪುರ, ಜೇವರ್ಗಿ, ಶಹಾಬಾದ್, ಸೇಡಂ ಮತ್ತು ಚಿತ್ತಾಪುರ ತಾಲೂಕುಗಳು, ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತು ವಡಗೇರ ತಾಲೂಕುಗಳು ಹಾಗೂ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕು ಪ್ರವಾಹಕ್ಕೆ ತುತ್ತಾಗಿದೆ ಎಂದು ಅಶೋಕ್ ಮಾಹಿತಿ ನೀಡಿದರು.

ಕಲಬುರಗಿ, ವಿಜಯಪುರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ 14 ತಾಲೂಕುಗಳ 247 ಗ್ರಾಮಗಳನ್ನು ಪ್ರವಾಹ ಸಂಭವಿಸಬಹುದಾದ ಗ್ರಾಮಗಳನ್ನಾಗಿ ಜಿಲ್ಲಾಡಳಿತ ಗುರುತಿಸಿದೆ. ಸುಮಾರು 136 ಗ್ರಾಮಗಳ 43,158 ಜನರನ್ನು ಸ್ಥಳಾಂತರಿಸಲಾಗಿದ್ದು, 5,016 ಜನರನ್ನು ಪ್ರವಾಹದಿಂದ ಪಾರು ಮಾಡಲಾಗಿದೆ ಎಂದು ಅಶೋಕ್ ತಿಳಿಸಿದರು.

ನೆರೆ ಸಂತ್ರಸ್ತರ ರಕ್ಷಣೆಗಾಗಿ ಎನ್‍ಡಿಆರ್‍ಎಫ್‍ನ 6 ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ 12 ಎನ್‍ಡಿಆರ್‍ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಈ ಪೈಕಿ 3 ತಂಡಗಳನ್ನು ಕಲಬುರಗಿ, ಎರಡು ತಂಡಗಳನ್ನು ಯಾದಗಿರಿ ಜಿಲ್ಲೆಗೆ ಮತ್ತು ಒಂದು ತಂಡವನ್ನು ರಾಯಚೂರು ಜಿಲ್ಲೆಗೆ ನಿಯೋಜಿಸಲಾಗಿದೆ. ಇದಲ್ಲದೆ, ಎಸ್‍ಡಿಆರ್‍ಎಫ್ ತಂಡಗಳನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಎರಡು ಹೆಲಿಕಾಪ್ಟರ್ ಗಳನ್ನು ಬೀದರ್ ನಲ್ಲಿ ಕಾಯ್ದಿರಿಸಲಾಗಿದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಿಂದ 14 ದೋಣಿಗಳನ್ನು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಕಳುಹಿಸಲಾಗಿದೆ. 233 ಕಾಳಜಿ ಕೇಂದ್ರಗಳನ್ನು ತೆರೆದು ಸುಮಾರು 38,676 ನಿರಾಶ್ರಿತರಿಗೆ ಆಶ್ರಯ ಒದಗಿಸಲಾಗಿದೆ. ಸಂತ್ರಸ್ತರಿಗೆ ಅಲ್ಲಿ ಪೌಷ್ಠಿಕ ಆಹಾರ ಒದಗಿಸುವಂತೆ ಹಾಗೂ ಕೊರೋನ ವೈರಸ್ ಹರಡದಂತೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಇನ್ನಿತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

ಅತಿವೃಷ್ಟಿಯಿಂದ ಅಕ್ಟೋಬರ್ ತಿಂಗಳಲ್ಲಿ 10 ಮಂದಿ ಮೃತಪಟ್ಟಿದ್ದು, 993 ಜಾನುವಾರುಗಳ ಜೀವ ಹಾನಿಯಾಗಿದೆ. 12,700 ಮನೆಗಳಿಗೆ ಹಾನಿಯಾಗಿದೆ. 6.3 ಲಕ್ಷ ಹೆಕ್ಟೇರ್(ಪ್ರಾಥಮಿಕ ವರದಿಯಂತೆ) ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇತ್ತೀಚೆಗೆ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಮುಖ್ಯಮಂತ್ರಿಯೂ ನಿನ್ನೆ ಅತಿವೃಷ್ಟಿ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದು ಅಶೋಕ್ ಹೇಳಿದರು.

ಆಗಸ್ಟ್, ಸೆಪ್ಟಂಬರ್ ನಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ 21 ಜಿಲ್ಲೆಗಳಲ್ಲಿನ 13,533 ಮನೆಗಳ ಪರಿಹಾರವಾಗಿ ಮೊದಲ ಕಂತಿನ ಅನುದಾನ 35.48 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳಿಗಾಗಿ ತಲಾ 10 ಸಾವಿರ ರೂ.ಗಳಂತೆ 16,075 ಕುಟುಂಬಗಳ ಪೈಕಿ ಇಲ್ಲಿಯವರೆಗೆ 12,113 ಕುಟುಂಬಗಳಿಗೆ ಪಾವತಿಸಲಾಗಿದೆ. ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 666.50 ಕೋಟಿ ರೂ.ಅನುದಾನ ಲಭ್ಯವಿದೆ ಎಂದು ಅವರು ತಿಳಿಸಿದರು.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಉಡುಪಿ ಜಿಲ್ಲೆಗೆ 17.93 ಕೋಟಿ ರೂ., ವಿಜಯಪುರ ಜಿಲ್ಲೆಗೆ 10 ಕೋಟಿ ರೂ., ಬೀದರ್ ಜಿಲ್ಲೆಗೆ 10 ಕೋಟಿ ರೂ., ಕಲಬುರಗಿ ಜಿಲ್ಲೆಗೆ 20 ಕೋಟಿ ರೂ., ಯಾದಗಿರಿ ಜಿಲ್ಲೆಗೆ 15 ಕೋಟಿ ರೂ. ಹಾಗೂ ರಾಯಚೂರು ಜಿಲ್ಲೆಗೆ 5 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಎಸ್‍ಡಿಆರ್‍ಎಫ್ ಅಡಿ ಸರಕಾರದಿಂದ ಒಟ್ಟಾರೆ ಪ್ರವಾಹ ಪರಿಹಾರಕ್ಕಾಗಿ 162.92 ಕೋಟಿ ರೂ.ಹಾಗೂ ರಕ್ಷಣಾ ಸಾಮಗ್ರಿ(ಅಗ್ನಿ ಶಾಮಕ ಇಲಾಖೆ)ಗಾಗಿ 20.09 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಶೋಕ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News