ಎಲ್ಗರ್ ಪರಿಷತ್ ಪ್ರಕರಣ: ಸ್ಟ್ಯಾನ್ ಸ್ವಾಮಿ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Update: 2020-10-23 18:16 GMT

 ಹೊಸದಿಲ್ಲಿ: ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ 83 ವಯಸ್ಸಿನ ಮಾನವ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

 ಸ್ವಾಮಿ ಅವರನ್ನು ಜಾರ್ಖಂಡ್‌ನ ರಾಂಚಿಯಿಂದ ಅಕ್ಟೋಬರ್ 8ರಂದು ಬಂಧಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಮರುದಿನ ಅವರನ್ನು ಮುಂಬೈಗೆ ಕರೆದೊಯ್ಯಲಾಗಿತ್ತು. ಇಳಿ ವಯಸ್ಸು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿ ಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು.

ಸ್ವಾಮಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಅವರಿಗೆ ಸಹಿ ಹಾಕಲು ಕೂಡ ಸಾಧ್ಯವಾಗಿಲ್ಲ. ಹೀಗಾಗಿ ಅವರ ಹೆಬ್ಬೆರಳು ಗುರುತು ಪಡೆಯಲಾಗಿದೆ ಎಂದು ಸ್ವಾಮಿ ಪರ ವಕೀಲರಾದ ಶರೀಫ್ ಶೇಖ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅವರ ಬಂಧನದ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಡಿಎಂಕೆ ನಾಯಕಿ ಕನ್ನಿಮೋಳಿ ಸಹಿತ ಹಲವು ಮಂದಿ ನಾಗರಿಕ ಹಕ್ಕು ಹೋರಾಟಗಾರರು ಸ್ಟಾನ್ ಸ್ವಾಮಿ ಅವರ ಬಂಧನವನ್ನು ಖಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News