ದೆಹಲಿ- ಗೋವಾ ವಿಮಾನದಲ್ಲಿ ಆತಂಕ ಸೃಷ್ಟಿಸಿದ 'ಭಯೋತ್ಪಾದಕ'!

Update: 2020-10-24 04:36 GMT

ಹೊಸದಿಲ್ಲಿ : ದೆಹಲಿಯಿಂದ ಗೋವಾಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ತನ್ನ ಆಸನದಿಂದ ಎದ್ದು, ನಮ್ಮ ವಿಮಾನದಲ್ಲಿ ಭಯೋತ್ಪಾದಕ ಇದ್ದಾನೆ ಎಂದು ಕೂಗಿಕೊಂಡದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿತು.

ದೆಹಲಿ ಪೊಲೀಸ್ ಪಡೆಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಎಂದು ಕೂಡಾ ಹೇಳಿಕೊಂಡ ಈತ ದೆಹಲಿಯ ಜಾಮಿಯಾನಗರದ ನಿವಾಸಿ. ಬಳಿಕ ಆ ವ್ಯಕ್ತಿಯನ್ನು ಬಂಧಿಸಿ, ವಿಮಾನವನ್ನು ಗೋವಾ ವಿಮಾನ ನಿಲ್ದಾಣದಲ್ಲಿ ಆದ್ಯತೆ (ಪ್ರಿಯಾರಿಟಿ ಲ್ಯಾಂಡಿಂಗ್) ಮೇಲೆ ಇಳಿಸಲಾಯಿತು. ಈತ ಮಾನಸಿಕ ಅಸ್ವಸ್ಥ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಏರ್‌ಇಂಡಿಯಾದ ಎಐ-883 ವಿಮಾನದಲ್ಲಿ ಮಧ್ಯಾಹ್ನ 3.15ಕ್ಕೆ ಸಂಭವಿಸಿದೆ. ಗೋವಾ ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಇಳಿಯಬೇಕು ಅನ್ನುವಷ್ಟರಲ್ಲಿ ಸೀಟಿನಿಂದ ಎದ್ದುನಿಂತ ಈ ವ್ಯಕ್ತಿ "ನಮ್ಮ ವಿಮಾನದಲ್ಲಿ ಭಯೋತ್ಪಾದಕರಿದ್ದಾರೆ" ಎಂದು ಚೀರಿಕೊಂಡಿದ್ದಾಗಿ ಕೇಂದ್ರೀಯ ಕೈಗಾರಿಕಾ ಭಧ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು ಹೇಳಿದ್ದಾರೆ.

ವಿಮಾನದ ಒಳಗೆ ಆತಂಕ, ಗೊಂದಲ, ಕೋಲಾಹಲದ ವಾತಾವರಣ ನಿರ್ಮಾಣವಾದಾಗ ಸಿಬ್ಬಂದಿ ಮಧ್ಯಪ್ರವೇಶಿಸಿ, ಆಸನದಲ್ಲಿ ಕುಳಿತು ಕೊಳ್ಳುವಂತೆ ಆ ವ್ಯಕ್ತಿಗೆ ಸೂಚಿಸಿದರು. ಆಗ ತಾನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕದ ಅಧಿಕಾರಿ ಎಂದು ಹೇಳಿಕೊಂಡ. ಆ ವ್ಯಕ್ತಿಯನ್ನು ಸಿಬ್ಬಂದಿ ಸಮಾಧಾನಪಡಿಸಿ ಕೂರಿಸಿದರು ಎಂದು ಹೇಳಲಾಗಿದೆ.

ಬಳಿಕ ಈ ವಿಚಾರವನ್ನು ಮುಖ್ಯ ಪೈಲಟ್‌ಗೆ ತಿಳಿಸಲಾಯಿತು. ತಕ್ಷಣವೇ ಮುಖ್ಯ ಪೈಲಟ್ ಗೋವಾ ವಾಯು ಸಂಚಾರ ನಿಯಂತ್ರಣ (ಎಟಿಸಿ) ವಿಭಾಗಕ್ಕೆ ಮಾಹಿತಿ ನೀಡಿ ತುರ್ತು ಅಗತ್ಯತೆ ಹಿನ್ನೆಲೆಯಲ್ಲಿ ಆದ್ಯತೆಯ ಲ್ಯಾಂಡಿಂಗ್‌ಗೆ ಅವಕಾಶ ಕೋರಿದರು. ಇದಕ್ಕೆ ಎಟಿಸಿ ಅಧಿಕಾರಿಗಳು ಅನುಮತಿ ನೀಡಿ, ತಕ್ಷಣವೇ ವಿಮಾನ ನಿಲ್ದಾಣ ಕಾರ್ಯಾಚರಣೆ ನಿಯಂತ್ರಣ ಕೇಂದ್ರ, ಸಿಐಎಸ್‌ಎಫ್ ಹಾಗೂ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಯಿತು.

"ವಿಮಾನ ಇಳಿದ ತಕ್ಷಣವೇ ಆತನನ್ನು ಸಿಐಎಸ್‌ಎಫ್ ಕಮಾಂಡೊಗಳು ಬಂಧಿಸಿದರು. ಸಿಐಎಸ್‌ಎಫ್ ಸಿಬ್ಬಂದಿ ಮತ್ತು ವಿಮಾನ ಸಿಬ್ಬಂದಿಯ ಬೆಂಗಾವಲಿನಲ್ಲಿ ವ್ಯಕ್ತಿಯನ್ನು ದಬೊಲಿಮ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News