ರಾಜ್ಯದಲ್ಲಿಯೂ ಕೊರೋನ ಲಸಿಕೆ ಉಚಿತವಾಗಿ ನೀಡಲು ಕ್ರಮ: ಡಿಸಿಎಂ ಅಶ್ವತ್ಥ ನಾರಾಯಣ

Update: 2020-10-24 10:57 GMT

ಬೆಳಗಾವಿ, ಅ. 24: ಮಾರಕ ಕೊರೋನ ಸೋಂಕಿಗೆ ಲಸಿಕೆ ಬಂದರೆ ರಾಜ್ಯದಲ್ಲಿಯೂ ಉಚಿತವಾಗಿ ನೀಡಲು ಸರಕಾರ ಕ್ರಮ ವಹಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿತರಿಗೆ ರಾಜ್ಯ ಸರಕಾರ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸುತ್ತಿದೆ. ಲಸಿಕೆಯನ್ನು ಉಚಿತವಾಗಿ ನೀಡಲು ಸರಕಾರ ಕ್ರಮ ಕೈಗೊಳ್ಳಲಿದ್ದು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.

ಇದೀಗ ರಾಜ್ಯದಲ್ಲಿ ಕೊರೋನ ಪರೀಕ್ಷೆ, ಚಿಕಿತ್ಸೆ ಸೇರಿದಂತೆ ಎಲ್ಲವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಮುಂದೆಯೂ ಲಸಿಕೆ ಬಂದರೆ ಅದೇ ರೀತಿಯಲ್ಲಿ ಸರಕಾರ ಜನರಿಗೆ ಒದಗಿಸುವ ಕೆಲಸ ಮಾಡಲಿದೆ ಎಂದ ಅವರು, ಬಿಹಾರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಕೋವಿಡ್ ಲಸಿಕೆ ಉಚಿತವಾಗಿ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದೇವೆ. ಅದರಲ್ಲಿ ತಪ್ಪೇನು ಇಲ್ಲ ಎಂದು ಸಮರ್ಥಿಸಿದರು.

ಕೊರೋನ ಲಸಿಕೆ ಕೊಡುವುದಿಲ್ಲ ಎಂದಿದ್ದರೆ ವಿಪಕ್ಷಗಳು ನಮ್ಮನ್ನು ಟೀಕೆ ಮಾಡುತ್ತಿದ್ದವು. ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಮಗೆ ಧಮ್ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಬಿಹಾರ ಜನರಿಗೆ ವಿಶ್ವಾಸ ಮೂಡಿಸಲು ನಾವು ಕೋವಿಡ್-19 ಲಸಿಕೆ ಉಚಿತವಾಗಿ ನೀಡುವ ಭರವಸೆ ನೀಡಿದ್ದೇವೆ ಎಂದು ಡಾ.ಅಶ್ವತ್ಥ ನಾರಾಯಣ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News