'ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ'ಕ್ಕೆ ರಾಜ್ಯಪಾಲರ ಅಂಕಿತ

Update: 2020-10-24 11:03 GMT

ಬೆಂಗಳೂರು, ಅ. 24: ರಾಜ್ಯದ ನಗರ ಪ್ರದೇಶಗಳಲ್ಲಿನ `ಬಿ' ಖರಾಬು ಭೂಮಿ ಸಕ್ರಮಗೊಳಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದಾರೆ.

ಸೆಪ್ಟಂಬರ್ ನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದ ಉಭಯ ಸದನಗಳಲ್ಲಿ ವಿಧೇಯಕ ಅಂಗೀಕರಿಸಲಾಗಿತ್ತು. ಅಂಗೀಕರಿಸಲ್ಪಟ್ಟ ವಿಧೇಯಕವನ್ನು ರಾಜ್ಯ ಸರಕಾರ ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗಿತ್ತು. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿ, ರಾಜ್ಯಪತ್ರ ಪ್ರಕಟಿಸಿದ್ದು ಈ ವಿಧೇಯಕ ಕಾಯ್ದೆಯಾಗಿ ರೂಪುಗೊಂಡಂತಾಗಿದೆ.

ಖಾಸಗಿ ನಿವೇಶನ ನಡುವೆ ಸಿಲುಕಿರುವ ಸರಕಾರಿ ಜಮೀನನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಮಾರ್ಗಸೂಚಿಯ ದರಕ್ಕೆ ಎರಡು ಪಟ್ಟು ದರ ನಿಗದಿ ಮಾಡಿ ಮಾರಾಟ ಮಾಡಬಹುದಾಗಿದೆ.

ರಾಜ್ಯದ ನಗರ ಪ್ರದೇಶನದಲ್ಲಿ ಮತ್ತು ಬಿಬಿಎಂಪಿ ವ್ಯಾಪ್ತಿಯ 18 ಕಿ.ಮೀ.ವರೆಗಿನ ಮತ್ತು ಇತರೆ ನಗರ ಪಾಲಿಕೆ ವ್ಯಾಪ್ತಿಯ 5 ಕಿ.ಮೀ.ವರೆಗಿನ ಬಿ ಖರಾಬು ಭೂಮಿಯನ್ನು ಮಾರಾಟ ಮಾಡಬಹುದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ನೂತನ ಕಾಯ್ದೆ ಜಾರಿಗೆ ಮೊದಲು ಸೊಸೈಟಿಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ ಇತರೆ ಉದ್ದೇಶಗಳಿಗೆ 15 ವರ್ಷಗಳಿಗಿಂತ ಮೊದಲು ಗುತ್ತಿಗೆ ನೀಡಿದ ಸರಕಾರಿ ಭೂಮಿಗಳ ಮಂಜೂರಾತಿಯನ್ನು ಸರಕಾರಕ್ಕೆ ಅಗತ್ಯ ಇಲ್ಲವೆಂದು ಖಚಿತಪಡಿಸಿಕೊಂಡ ಬಳಿಕ ಮಾರಾಟ ಮಾಡಲಾಗುತ್ತದೆ ಎಂಬ ಷರತ್ತನ್ನು ವಿಧೇಯಕದಲ್ಲಿ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News