ಕಾಲೇಜು ಆರಂಭ ವಿಚಾರದಲ್ಲಿ ಟೀಕೆ ಶೋಭೆಯಲ್ಲ: ಸಿದ್ದರಾಮಯ್ಯ ವಿರುದ್ಧ ಅಶ್ವತ್ಥ ನಾರಾಯಣ ವಾಗ್ದಾಳಿ

Update: 2020-10-24 12:53 GMT

ಬೆಳಗಾವಿ, ಅ. 24: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು, ಅವರು ಕಾಲೇಜು ಆರಂಭವನ್ನು ಸ್ವಾಗತಿಸಬೇಕಿತ್ತು. ಆದರೆ, ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಕಾಲೇಜು ಆರಂಭಿಸಬೇಕೆಂದು ವಿದ್ಯಾರ್ಥಿಗಳ ಒತ್ತಡ ಇತ್ತು. ಹೀಗಾಗಿ ಸರಕಾರ ಅದಕ್ಕೆ ಮನ್ನಣೆ ನೀಡಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಇಂದಿಲ್ಲಿ ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ವಿಪಕ್ಷಗಳಿಗೂ ಜವಾಬ್ದಾರಿ ಇದ್ದು, ಅವರು ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಿತ್ತು. ಅದು ಬಿಟ್ಟು ಟೀಕೆ ಮಾಡುವುದು ಅವರಿಗೆ ಶೋಭೆಯಲ್ಲ ಎಂದು ವಾಗ್ದಾಳಿ ನಡೆಸಿದರು.

ವಿದ್ಯಾರ್ಥಿಗಳ ಭವಿಷ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕೊರೋನ ಸೋಂಕಿನ ನೆಪದಲ್ಲಿ ಯಾವುದೂ ನಿಲ್ಲಬಾರದು ಎಂಬ ಉದ್ದೇಶದಿಂದ ಕಾಲೇಜು ಆರಂಭಕ್ಕೆ ಸರಕಾರ ಕ್ರಮ ಕೈಗೊಂಡಿದೆ. ಕೇವಲ ಆನ್‍ಲೈನಲ್ಲಿ ಪಾಠ ಮಾಡಿದರೆ ಬಹಳ ಜನರಿಗೆ ಅರ್ಥವಾಗುವುದಿಲ್ಲ. ಜೊತೆಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುತ್ತಿದೆ. ಹೀಗಾಗಿ ಅವಶ್ಯಕತೆ ಇರುವವರಿಗೆ ತರಗತಿಗೆ ಬರಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು.

ಭ್ರಷ್ಟಾಚಾರ ರಹಿತವಾದ ಸಮಾಜ ನಿರ್ಮಿಸಬೇಕೆಂಬುದು ಬಿಜೆಪಿ ಉದ್ದೇಶ. ಹೀಗಾಗಿ ನಾವು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಎಲ್ಲ ಹಂತದಲ್ಲೂ ಸುಧಾರಣೆಗೆ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸರಕಾರ ಭ್ರಷ್ಟಾಚಾರಕ್ಕೆ ಯಾವುದೇ ಸಂದರ್ಭದಲ್ಲಿಯೂ ಅವಕಾಶ ನೀಡುವುದಿಲ್ಲ. ಅದನ್ನು ನಿರ್ಮೂಲನೆ ಮಾಡಲು ಸಕಲ ಪ್ರಯತ್ನ ಮಾಡುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಹಿರೇಬಾಗೇವಾಡಿಯಲ್ಲೇ ವಿವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ತಾಲೂಕಿನ ಹಿರೇಬಾಗೇವಾಡಿಯಲ್ಲಿ ಮಂಜೂರಾಗಿರುವ ಸ್ಥಳದಲ್ಲೇ ಅಭಿವೃದ್ಧಿಪಡಿಸಲಾಗುವುದು. ಅದಕ್ಕೆ ಅಗತ್ಯವಿರುವ ನೂರು ಕೋಟಿ ರೂ.ಅನುದಾನವನ್ನು ನೀಡಲಾಗುವುದು. ವಿವಿ ಬೇರೆ ಕಡೆಗೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ವಿವಿ ಸ್ಥಳಾಂತರಕ್ಕೆ ಆಗ್ರಹಿಸಿ ಹೋರಾಟ ಮಾಡುವವರ ಮನವೊಲಿಕೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ರಾಮಚಂದ್ರಗೌಡ, ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ.ಎಸ್.ಎಂ.ಹುರಕಡ್ಲಿ, ಸಿಂಡಿಕೇಟ್ ಸದಸ್ಯರಾದ ಡಾ.ಆನಂದ ಹೊಸೂರ, ಎಚ್.ಎಸ್.ಶಿಗ್ಗಾಂವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News