ಪ್ರವಾಹ ಪೀಡಿತ ಪ್ರದೇಶಕ್ಕೆ ಪ್ರಧಾನಿ ಭೇಟಿ ನೀಡುವಂತೆ ಆಗ್ರಹಿಸಿ ಧರಣಿ

Update: 2020-10-24 14:22 GMT

ಯಾದಗಿರಿ, ಅ.24: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿಬೇಕು ಎಂದು ಆಗ್ರಹಿಸಿ ನಗರದ ಬಸ್ ನಿಲ್ದಾಣದಲ್ಲಿ ಮಲಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಯಾಕೆ ಭೇಟಿ ನೀಡಲಿಲ್ಲ? ಪಕ್ಕದ ತಮಿಳುನಾಡು, ಆಂಧ್ರದಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೆ ನರೇಂದ್ರ ಮೋದಿ ಬರುತ್ತಿದ್ದರು. ಪ್ರವಾಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಸಂಸದರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಸಂಸದರು ಪ್ರಧಾನಿ ಕಾರ್ಯಾಲಯದ ಮುಂದೆ ಸತ್ಯಾಗ್ರಹ ಮಾಡಬೇಕಿತ್ತು ಎಂದರು.

ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಅವರು ನಡೆಸಿದ ವೈಮಾನಿಕ ಸಮೀಕ್ಷೆ ಬಗ್ಗೆ ಅಸಮಾಧಾನವಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಭೇಟಿ ನೀಡಬೇಕು. ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸರಕಾರ 50 ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರಕಾರ ಪ್ರವಾಹ ಸ್ಥಿತಿಯನ್ನು ನಿಭಾಯಿಸುವಲ್ಲಿ ಸೋತಿದೆ. ಇತ್ತೀಚೆಗೆ ಸಿಎಂ ಬಿ.ಎಸ್‍. ಯಡಿಯೂರಪ್ಪ ನಡೆಸಿದ ವೈಮಾನಿಕ ಸಮೀಕ್ಷೆಯ ಉತ್ತಮವಾಗಿರಲಿಲ್ಲ. ಅವರು ವಿಮಾನದಿಂದ ಕೆಳಗಿಳಿದು ನೋಡಿದರೆ ಪರಿಸ್ಥಿತಿ ಅರ್ಥ ಆಗುತ್ತಿತ್ತು. ಹೈದರಾಬಾದ್‍ ಕರ್ನಾಟಕ, ಉತ್ತರ ಕರ್ನಾಟಕದ ಕೆಲವು ಭಾಗಗಳು ಮುಳುಗಿ ಹೋಗಿವೆ. ಮುಳುಗಡೆಯಾದ ಗ್ರಾಮಗಳನ್ನು ಸ್ಥಳಾಂತರ ಮಾಡುವುದು ಸರಕಾರದ ಕರ್ತವ್ಯ. ಹೊಸ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News