ಪರಿಷತ್ತಿನ ಶಿಕ್ಷಕರ-ಪದವೀಧರ ಕ್ಷೇತ್ರಗಳಿಗೆ ಚುನಾವಣೆ: ಅ.28ಕ್ಕೆ 40 ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ ಮತದಾರ

Update: 2020-10-24 14:29 GMT

ಬೆಂಗಳೂರು, ಅ. 24: ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರರ ನಾಲ್ಕು ಕ್ಷೇತ್ರಗಳಿಗೆ ಇದೇ ತಿಂಗಳ 28ರಂದು ಮತದಾನ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಅಗತ್ಯ ಸಿದ್ದತೆ ಮಾಡಿಕೊಂಡಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 549 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸಹಿತ ಮೂರು ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳು ಅಬ್ಬರ ಪ್ರಚಾರ ನಡೆಸುತ್ತಿದ್ದು, ಮತದಾನ ನಡೆಯುವ ದಿನಕ್ಕೆ 48 ಗಂಟೆಗಳ ಮೊದಲು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಅಭ್ಯರ್ಥಿಗಳನ್ನು ಹೊರತು ಪಡಿಸಿ ಇನ್ನುಳಿದವರು 48ಗಂಟೆ ಮೊದಲೇ ಕ್ಷೇತ್ರ ಬಿಟ್ಟು ತೆರಳಬೇಕು. ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಲ್ಲಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

549 ಮತಗಟ್ಟೆ ಸ್ಥಾಪನೆ: ಎರಡು ಶಿಕ್ಷಕರ ಮತ್ತು ಎರಡು ಪದವೀಧರರ ಕ್ಷೇತ್ರಗಳು ಸೇರಿದಂತೆ ನಾಲ್ಕೂ ಕ್ಷೇತ್ರಗಳಲ್ಲಿ ಒಟ್ಟು 549 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 146, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 187, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 69 ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 147 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮತದಾರರು: ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ 48,584 ಪುರುಷರು, 27,186 ಮಹಿಳೆಯರು ಸೇರಿ ಒಟ್ಟು 75,781 ಮತದಾರರಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 68,414 ಪುರುಷರು, 40,711 ಮಹಿಳೆಯರು ಮತ್ತು 4 ಇತರೆ ಸೇರಿ ಒಟ್ಟು 1.09 ಲಕ್ಷ ಮತದಾರರಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 19,002 ಪುರುಷರು, 10,326 ಮಹಿಳೆಯರು ಸೇರಿ ಒಟ್ಟು 29,330 ಮತದಾರರಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 7,992 ಪುರುಷರು, 14,266 ಮಹಿಳೆಯರು ಸೇರಿ ಒಟ್ಟು 22,261 ಮತದಾರರಿದ್ದಾರೆಂದು ಆಯೋಗ ತಿಳಿಸಿದೆ.

ಕಣದಲ್ಲಿ 40 ಮಂದಿ ಅಭ್ಯರ್ಥಿಗಳು: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ-9, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ-5, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ-15 ಮತ್ತು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ-11 ಅಭ್ಯರ್ಥಿಗಳು ಅಖಾಡದಲ್ಲಿದ್ದು, ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ನಾಲ್ಕು ಕ್ಷೇತ್ರದಲ್ಲಿ 22 ಮಂದಿ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 40 ಮಂದಿ ಅಂತಿಮ ಕಣದಲ್ಲಿದ್ದಾರೆ.

ಎಡಗೈನ ತೋರು ಬೆರಳಿಗೆ ಶಾಹಿ

ವಿಧಾನ ಪರಿಷತ್ತಿನ ನಾಲ್ಕೂ ಕ್ಷೇತ್ರಗಳ ಅ.28ರಂದು ನಡೆಯಲಿರುವ ಮತದಾನದ ದಿನದಂದು ಮತದಾರರಿಗೆ ಎಡಗೈನ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಾಕಲು ಚುನಾವಣಾ ಆಯೋಗವು ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News