ಕಾಲೇಜು ಪ್ರಾರಂಭ ಸರಕಾರದ ಏಕಪಕ್ಷೀಯ ನಿರ್ಧಾರ: ಎಐಡಿಎಸ್‍ಒ ಖಂಡನೆ

Update: 2020-10-24 15:45 GMT

ಬೆಂಗಳೂರು, ಅ.24: ನವೆಂಬರ್ 17ರಿಂದ ಕಾಲೇಜುಗಳನ್ನು ಪ್ರಾರಂಭಿಸುವುದರ ಕುರಿತು ರಾಜ್ಯ ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಎಐಡಿಎಸ್‍ಒ(ಆಲ್‍ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್) ರಾಜ್ಯಾಧ್ಯಕ್ಷೆ ಅಶ್ವಿನಿ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಲೇಜುಗಳನ್ನು ಪ್ರಾರಂಭಿಸುವುದರ ಸಂಬಂಧಪಟ್ಟ ಯಾರೊಂದಿಗೂ ಚರ್ಚಿಸದೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನಿರ್ಧಾರವನ್ನು ಕೈಗೊಂಡಿದೆ. ಕಾಲೇಜುಗಳು ಪ್ರಾರಂಭವಾದ ನಂತರ ಹರಡುವ ಕೊರೋನ ಕೇಸುಗಳ ಜವಾಬ್ದಾರಿಯನ್ನು ಸರಕಾರ ಹೊರುವುದೇ ಎಂದು ಪ್ರಶ್ನಿಸಿದ್ದಾರೆ.

ಶಾಲಾ ಮಕ್ಕಳಿಗೆ ಕೈಗೊಂಡಿದ್ದ 'ವಿದ್ಯಾಗಮ' ಯೋಜನೆಯಿಂದ ಕೊರೋನ ಕೇಸುಗಳು ವರದಿಯಾದ ನಂತರ ಅದನ್ನು ಕೈಬಿಟ್ಟು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನೊಂದೆಡೆ ಕಾಲೇಜುಗಳನ್ನು ಪ್ರಾರಂಭಿಸಲು ಮುಂದಾಗಿರುವ ಸರಕಾರದ ನಿರ್ಧಾರವು ವಿರೋಧಾಭಾಸದಿಂದ ಕೂಡಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳು ಇನ್ನೂ ಹೆಚ್ಚಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸರಕಾರ ಈ ಕುರಿತು ಆತಂಕವನ್ನು ವ್ಯಕ್ತಪಡಿಸಿದೆ. ಹೀಗಿದ್ದಾಗ, ಪರಿಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡದೆ ಕಾಲೇಜು ಪ್ರಾರಂಭಿಸಲು ಮುಂದಾಗಿರುವುದು ಸರಿಯಾದ ನಿರ್ಧಾರವಲ್ಲವೆಂದು ಅವರು ಅಭಿಪ್ರಾಯಿಸಿದ್ದಾರೆ.

ಸರಕಾರವು ಯಾವುದೇ ಕಾರಣಕ್ಕೂ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಲಾಬಿಗೆ ಬಲಿಯಾಗದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿತಾಸಕ್ತಿಗೆ ಬದ್ಧವಾಗಿರಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News